ಚುನಾವಣೆಯ ನಂತರ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಪೋಟವಾಗಲಿದೆ: ಸಿಎಂ ಭವಿಷ್ಯ
ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಚಿಂತೆ ಮಾಡುವುದು ಬಿಡಲಿ, ಅದು ಸುಭದ್ರವಾಗಿ ಐದು ವರ್ಷ ಪೂರ್ಣಗೊಳಿಸಲಿದೆ. ನೀವು ನಿಮ್ಮ ಬಿಜೆಪಿ ಪಕ್ಷದ ಬಗ್ಗೆ ಯೋಚನೆ ಮಾಡಿ, ಲೋಕಸಭೆ ಚುನಾವಣೆಯ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ರಾಜ್ಯ ಬಿಜೆಪಿ ನಾಯಕರ ಹೇಳಿಕೆಗಳಿಗೆ ಸಿಎಂ ತಿರುಗೇಟು ನೀಡಿದ್ದು, ಬಿಜೆಪಿಗರ ಹೇಳಿಕೆ ರಾಜಕೀಯ ಪ್ರೇರಿತವಾದುದ್ದು. ನಮ್ಮಲ್ಲಿ ಒಳಜಗಳ ಇಲ್ಲ. ಹಾಗಿದ್ದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.
ಮುಕ್ಕಾಲು ಪಾಲು ಬಿಜೆಪಿಯ ನಾಯಕರೇ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ತಲೆದಂಡಕ್ಕಾಗಿ ವ್ಯೂಹ ರಚನೆಯಲ್ಲಿ ತೊಡಗಿದ್ದಾರೆ. ಚುನಾವಣೆಯಲ್ಲಿನ ಹಿನ್ನಡೆಯನ್ನು ತಂದೆ-ಮಕ್ಕಳ ತಲೆಗೆ ಕಟ್ಟಿ ಅವರನ್ನು ಮೂಲೆಗೆ ತಳ್ಳುವ ಕಸರತ್ತಿನ ತಯಾರಿ ಭರದಿಂದ ನಡೆಯುತ್ತಿದೆ. ಇದರಿಂದಾಗಿ ಚುನಾವಣೆಯ ನಂತರ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಪೋಟವಾಗಲಿದೆ ಎಂದು ಸಿಎಂ ಭವಿಷ್ಯ ನುಡಿದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತ ಬಿಜೆಪಿ ಅತೃಪ್ತ ನಾಯಕರೆಲ್ಲ ತಮಗೆ ಆಗಿರುವ ಅನ್ಯಾಯದ ವಿರುದ್ಧ ಸೇಡಿಗಾಗಿ ತಹತಹಿಸುತ್ತಿದ್ದಾರೆ. ಚುನಾವಣಾ ಫಲಿತಾಂಶ ಹೊರಬಿದ್ದ ಕೂಡಲೇ ಈ ಸೇಡಿನ ಜ್ವಾಲೆ ಧಗಧಗಿಸಿದರೆ ಆಶ್ಚರ್ಯ ಇಲ್ಲ. ಹೀಗಾಗಿ ನೀವು ನಿಮ್ಮ ಬಿಜೆಪಿ ಪಕ್ಷದ ಬಗ್ಗೆ ಯೋಚನೆ, ಚಿಂತನೆ ಮಾಡಿ ಎಂದು ಸಿಎಂ ಬಿಜೆಪಿ ನಾಯಕರ ಟಾಂಗ್ ನೀಡಿದ್ದಾರೆ.