ಅಕ್ರಮ ದಾರಿ ಹಿಡಿದು ಹಣ ಸಂಪಾದನೆ ಮಾಡಲು ಹೋದ ಮಹಿಳೆ ಹಾಗೂ ಆಕೆಯ ಸಹಚರರು ಇದೀಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಪೋಷಕರೇ ಎಚ್ಚರ, ನಿಮ್ಮ ಮಕ್ಕಳ ಬಗ್ಗೆ ಗಮನವಿರಲಿ. ಇತ್ತೀಚೆಗಷ್ಟೇ 37ರ ಹರೆಯದ ಮಹಿಳೆಯೊಬ್ಬಳು ಮಾಡಿದ ಕೃತ್ಯವನ್ನು ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಚೆನೈಯ ಮಹಿಳೆ ನಾದಿಯಾ ಅಪ್ರಾಪ್ತ ಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡಿ, ಅಪಾರ ಹಣ ವಸೂಲಿ ಮಾಡುತ್ತಿದ್ದಳು. ಆದರೆ, ಆಕೆಯ ಪಾಪದ ಕೊಡ ತುಂಬಿದ್ದರಿಂದ ಪೊಲೀಸರ ದಾಳಿ ವೇಳೆ ಮಹಿಳೆ ಸಿಕ್ಕಿಬಿದ್ದ ಪ್ರಕರಣ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಚೆನ್ನೈಯಲ್ಲಿ ಶಾಲಾ ಬಾಲಕಿಯರನ್ನು ದುರ್ಬಳಕೆ ಮಾಡಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ನದಿಯಾ ಎಂಬ ಹೆಸರಿನ 37 ವರ್ಷದ ಮಹಿಳೆ ಸೇರಿದಂತೆ ಏಳು ಮಂದಿಯನ್ನು ಆರೋಪಿಗಳನ್ನು ಪೊಲೀಸರು ಬಂಧಿಸಿ, ತನಿಖೆ ನಡೆಸಿದಾಗ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿದೆ.
ಚೆನ್ನೈನಲ್ಲಿ ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂಬ ದೂರು ಪೊಲೀಸ್ ಕಮಿಷನರ್ ಸಂದೀಪ್ ರಾಥೋಡ್ ಅವರಿಗೆ ಬಂದಿತ್ತು. ಮಕ್ಕಳ ಕಲ್ಯಾಣ ಸಮಿತಿ ಈ ದೂರು ನೀಡಿತ್ತು. ಕೇಂದ್ರ ಅಪರಾಧ ವಿಭಾಗದ ಇನ್ಸ್ ಪೆಕ್ಟರ್ ಸೆಲ್ವರಾಣಿ ಅವರ ನೇತೃತ್ವದಲ್ಲಿ ತನಿಖೆ ಕೈಗೆತ್ತಿಕೊಂಡು, ಖಚಿತ ಮಾಹಿತಿ ಮೇರೆಗೆ ಚೆನ್ನೈನ ಕೋವಲರವಕ್ಕಂ ಜೈನಗರ 2ನೇ ಬೀದಿಯಲ್ಲಿರುವ ಮನೆಯೊಂದರಲ್ಲಿ ಶೋಧ ನಡೆಸಲಾಯಿತು. ಈ ವೇಳೆ 70 ವರ್ಷದ ವ್ಯಕ್ತಿಯೊಬ್ಬ 17 ವರ್ಷದ ಹುಡುಗಿಯೊಂದಿಗೆ ಸಿಕ್ಕಿಬಿದ್ದಿದ್ದಾನೆ ಹಾಗೂ ಆರೋಪಿಯನ್ನು ವಿಚಾರಣೆ ನಡೆಸಿದಾಗ ನಾದಿಯಾ ಎಂಬ ಮಹಿಳೆಯ ಅಕ್ರಮ ಅವ್ಯವಹಾರ ಬಯಲಾಗಿದೆ. ಆರೋಪಿ ನಾದಿಯಾ, ಬಾಲಕಿಯನ್ನು ತನ್ನ ಬಳಿಗೆ ಕಳುಹಿಸಿದ್ದಳು ಎಂದು ಪೊಲೀಸ್ ತನಿಖೆಯಲ್ಲಿ 70 ವರ್ಷದ ಆತ ಬಾಯಿಬಿಟ್ಟಿದ್ದಾನೆ. ಇದಾದ ಬಳಿಕ ನಾದಿಯಾ ಹಾಗೂ ಆಕೆಯ ಸಹೋದರಿ ಸುಮತಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಕುತೂಹಲಕಾರಿ ಸಂಗತಿಗಳು ಬಯಲಾಗಿವೆ.

ಆರೋಪಿ ನಾದಿಯಾಳ ಮಗಳು ಪಿಯುಸಿಯಲ್ಲಿ ಓದುತ್ತಿದ್ದಾಳೆ. ಶಾಲೆಯಲ್ಲಿ ತನ್ನೊಂದಿಗೆ ಓದುತ್ತಿರುವ ಸುಂದರ, ಬಡ ವಿದ್ಯಾರ್ಥಿನಿಯರನ್ನು ಮನೆಗೆ ಕರೆತರುವಂತೆ ನಾದಿಯಾ ತನ್ನ ಮಗಳಿಗೆ ಹೇಳುತ್ತಿದ್ದಳು. ತಾಯಿ ಹೇಳಿದಂತೆ ಮಗಳು ಕೂಡ ತನ್ನ ಸಹಪಾಠಿಗಳನ್ನು ಪ್ರತಿದಿನ ಕರೆದುಕೊಂಡು ಬರುತ್ತಿದ್ದಳು. ವಿದ್ಯಾರ್ಥಿನಿಯರಿಗೆ ಹಣದ ಆಸೆ ತೋರಿಸಿ, ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡುತ್ತಿದ್ದಳು. ಇದಕ್ಕಾಗಿ ಆಕೆ ಲಕ್ಷಗಟ್ಟಲೆ ಖರ್ಚು ಮಾಡುತ್ತಿದ್ದಳು. ಸ್ಥಳೀಯ ದಲ್ಲಾಳಿಗಳ ಮೂಲಕ ಹುಡುಗಿಯರನ್ನು ಲಾಡ್ಜ್ಗಳಿಗೆ ಲೈಂಗಿಕ ಬಳಕೆಗಾಗಿ ಕಳುಹಿಸಲಾಗುತ್ತಿತ್ತು ಎಂಬ ಅಂಶವೂ ಬಹಿರಂಗವಾಗಿದೆ. ಒಂದು ಹುಡುಗಿಗೆ ಒಂದು ರಾತ್ರಿಗೆ 25ರಿಂದ 35 ಸಾವಿರ ರೂ.ವರೆಗೂ ಮಾತನಾಡಿ ಸಹೋದರಿ ಸುಮತಿಯ ಪತಿ ರಾಮಚಂದ್ರನ್ ಜತೆ ಆಟೋದಲ್ಲಿ ನಾದಿಯಾ ಕಳುಹಿಸುತ್ತಿದ್ದಳು ಎಂದು ತಿಳಿದುಬಂದಿದೆ.

ಕೊನೆಗೂ ಪೊಲೀಸರ ದಾಳಿಯಿಂದ ನಾದಿಯಾಳ ಕರಾಳ ಮುಖ ಹೊರಬಿದ್ದಿದೆ. ನಾದಿಯಾ ಆಕೆಯ ಸಹೋದರಿ ಸುಮತಿ, ಆಕೆಯ ಸಹೋದರಿಯ ಎರಡನೇ ಪತಿ ರಾಮಚಂದ್ರನ್, ನೇಪಾಳಿ ಯುವಕ ಮಾಯಾ ಒಲಿ ಮತ್ತು ಅಶೋಕ್ ಎಂಬವರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ಅದೇ ರೀತಿ ಸೈದಾಪೇಟೆಯ 70 ವರ್ಷದ ವ್ಯಕ್ತಿ ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.