ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನುವ ಗಾದೆ ಮಾತು ಹುಟ್ಟಿಕೊಂಡಿರುವುದು ಇವರನ್ನು ನೋಡಿ ಆಗಿರಬೇಕು. ಆ ರೀತಿಯಲ್ಲಿ ಸರಕಾರದ ಬೊಕ್ಕಸವನ್ನೇ ಲೂಟಿ ಮಾಡಿ ಗಡದ್ದಾಗಿ ಮೇಯಿಸಿಕೊಂಡ ಅಧಿಕಾರಿ ವರ್ಗದ ಕಥೆ ಇದು. ಒಂದಲ್ಲ..ಎರಡಲ್ಲ.. ಬರೋಬ್ಬರಿ 138 ಕೋಟಿ ಖರ್ಚು ಮಾಡಿ ನಿರ್ಮಿಸಿದ ಏತ ನೀರಾವರಿ ಯೋಜನೆ ಇದೀಗ ನೀರಲ್ಲಿಟ್ಟ ಹೋಮದಂತಾಗಿದೆ. ಅಷ್ಟಕ್ಕೂ ಇದು ನಡೆದಿರುವುದು ಎಲ್ಲಿ ಗೊತ್ತೆ? ಕಾರ್ಕಳದ ಎಣ್ಣೆಹೊಳೆಯಲ್ಲಿ.
ಕಾರ್ಕಳ ಎಂದರೆ ಸಾಕು. ಬರೀ ವಿವಾದದಿಂದಲೇ ಸುದ್ದಿಯಾಗುತ್ತಿರುವ ಕ್ಷೇತ್ರ. ಸಿಮೆಂಟು ಮಹಿಮೆಯಿಂದ ರಾಜ್ಯದಾದ್ಯಂತ ಸುದ್ದಿಯಾಗಿದ್ದ ಕಾರ್ಕಳ ಪರಶುರಾಮ ಟೀಮ್ ಪಾರ್ಕ್ ವಿವಾದದಿಂದ ದೇಶದಾದ್ಯಂತ ಸುದ್ದಿಯಾಯಿತು. ಪರಶುರಾಮನ ಕಂಚಿನ ಮೂರ್ತಿ ಬದಲಿಗೆ ಫೈಬರ್ ಮೂರ್ತಿ ಅಳವಡಿಸಿ ರಾತ್ರೋರಾತ್ರಿ ಮಾಯವಾಗಿತ್ತು. ಆ ಮೂಲಕ ಕಾರ್ಕಳ ಅಭಿವೃದ್ಧಿ ಹೆಸರಿನಲ್ಲಿ ಎಷ್ಟೊಂದು ಮುಂಡಾ ಮೋಚುತ್ತದೆ ಅನ್ನುವುದಕ್ಕೆ ಇದುವೇ ಸಾಕ್ಷಿ ಸಾಕು.

ಇದೀಗ ಕಾರ್ಕಳದ ಎಣ್ಣೆಹೊಳೆ ಡ್ಯಾಂ ದೊಡ್ಡ ಸುದ್ಧಿಯಲ್ಲಿದೆ. ಬಹು ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಾಗಿ ತಲೆ ಎತ್ತಿ ನಿಂತಿದ್ದ ಎಣ್ಣೆ ಹೊಳೆ ಡ್ಯಾಂ ನ ಕಥೆ ಕೇಳಿದರೆ ಇಲ್ಲಿನ ಜನ ವ್ಯಥೆ ಪಡುತ್ತಿದ್ದಾರೆ. ಎಣ್ಣೆಹೊಳೆ, ಅಜೆಕಾರು, ಕೊರಂಜಿಬೈಲ್, ಮಾರ್ನೆ, ಬೆಳತೊಟ್ಟಿ, ಹಿರ್ಗಾನ, ದೇವಸ್ಯೆ, ಮುಂಡಾಲು, ಹೆರ್ಮಾಡೆ ಈ ಒಂಭತ್ತು ಗ್ರಾಮಕ್ಕೆ ಕುಡಿಯುವ ನೀರು, ರೈತರಿಗೆ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಆರಂಭಿಸಿ ಪೂರ್ತಿಯಾಗಿ ಕೆಲವು ವರ್ಷಗಳು ಸಂದಿವೆ. ಖುದ್ದು ಅಂದಿನ ಮುಖ್ಯಮಂತ್ರಿ ಈ ಯೋಜನೆಯನ್ನು ಉದ್ಘಾಟಿಸಿದ್ದರು. ಬರೋಬ್ಬರಿ 138 ಕೋಟಿ ವ್ಯಯಿಸಿ ಈ ಯೋಜನೆ ಅನುಷ್ಠಾನಕ್ಕೆ ಬಂದಿತ್ತು. ಆದರೆ ಇಲ್ಲಿನ ಜನರಿಗೆ ನೀರು ಬಂದಿದೆಯಾ ಅಂತ ಕೇಳಿದರೆ ಅದೂ ಇಲ್ಲ. ಇದು ಬುಲೆಟ್ ಟ್ರೈನ್ ರೀತಿಯಂತಾಗಿದೆ. ಆಸೆ ಹುಟ್ಟಿಸಿ ಯಾಮಾರಿಸುತ್ತಾರಲ್ಲ ಅದೇ ರೀತಿ. ನೀರು ನಿಲ್ಲದ ಕಡೆ ಅಣೆಕಟ್ಟು ನಿರ್ಮಿಸಿ ಪರಮ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಏತ ನೀರಾವರಿ ಯೋಜನೆ. ಅಭಿವೃದ್ಧಿ ಹೆಸರಿನಲ್ಲಿ ನಡೆಸಿದ ವೈಫಲ್ಯದ ಕಾಮಗಾರಿ ಎಂದು ಇದೀಗ ಕಾರ್ಕಳದ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅಣೆಕಟ್ಟು ನಿರ್ಮಿಸಿದ ಜಾಗದಲ್ಲಿ ನೀರು ನಿಲ್ಲಲ್ಲ. ಬೇರೆ ಕಡೆ ನೀರು ನಿಲ್ಲುವುದಂತೆ. ಅಧಿಕಾರಿಗಳು ಎಷ್ಟೊಂದು ಸ್ಮಾರ್ಟ್ ಅನ್ನುವುದು ಈ ಕಾಮಗಾರಿಯನ್ನು ನೋಡಿದಾಗ ಅರಿವಿಗೆ ಬರುತ್ತದೆ. ಬರೀ ದುಡ್ಡು ದೋಚಲು ಅಧಿಕಾರಿಗಳು ಮಾಡಿರುವ ಕಾಮಗಾರಿ ಇದಾಗಿದೆ. ಸೂಕ್ತ ಮುಂದಾಲೋಚನೆ, ದೂರದೃಷ್ಟಿ ಇಲ್ಲದೆ ಕಾಮಗಾರಿ ನಡೆಸಿದರೆ ಏನೆಲ್ಲಾ ಆಗಬಹುದು ಅನ್ನುವುದಕ್ಕೆ ಎಣ್ಣೆಹೊಳೆ ಡ್ಯಾಂ ಪರಮ ಸಾಕ್ಷಿ. ಒಟ್ಟಾರೆ ಕಾರ್ಕಳದ ಜನ ಮೂರ್ಖರಾಗುತ್ತಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ದುಡ್ಡು ದೋಚುವ ವೈಫಲ್ಯ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿದೆ. ಜನಸಾಮಾನ್ಯರು ಕಣ್ಣಿದ್ದು ಕುರುಡರಾಗಿದ್ದಾರೆ. ಯಥಾ ರಾಜ ತಥಾ ಪ್ರಜಾ.