ಆಗ್ನೇಯ ಏಷ್ಯಾ ದೇಶಗಳಲ್ಲಿ ಸೃಷ್ಟಿಯಾದ ಸೈಬರ್ ವಂಚನೆ ಪ್ರಕರಣಗಳು ಭಾರತದಲ್ಲಿ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿವೆ. ವಂಚನೆ ಪ್ರಕರಣದಲ್ಲಿ ಅರ್ಧದಷ್ಟು ಹಣ ಹೂಡಿಕೆ, ವ್ಯಾಪಾರ, ಡಿಜಿಟಲ್ ಫ್ರಾಡ್, ಡೇಟಿಂಗ್ ವಂಚನೆಗಳಲ್ಲಿ ಕಂಡು ಬಂದಿದೆ.
ದೇಶವ್ಯಾಪಿ ಮಿತಿಮೀರಿ ಹೆಚ್ಚುತ್ತಿರುವ ವಂಚನೆ ಪ್ರಕರಣಗಳು ಜಾರ್ಖಂಡ್ ನ ಜಮ್ತಾರಾ ಹಾಗೂ ರಾಜಸ್ಥಾನದ ಮೇವತ್ ಗಳಂತ ಹಾಟ್ ಸ್ಪಾಟ್ ಕೇಂದ್ರಗಳನ್ನು ಮೀರಿಸುವಷ್ಟರ ಮಟ್ಟಿಗೆ ಹೆಚ್ಚಳವಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಇಂತಹ 85 ಸಾವಿರ ವಂಚನೆ ಪ್ರಕರಣಗಳು ವರದಿಯಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“2024 ರ ಜನವರಿಯಿಂದ ಏಪ್ರಿಲ್ ತಿಂಗಳಲ್ಲಿ 1,420 ಕೋಟಿ ರೂಪಾಯಿ ಮೌಲ್ಯದ ವಂಚನೆ ನಡೆದಿದೆ. 62,587 ಹೂಡಿಕೆ ಅವ್ಯವಹಾರ, 20,043 ಟ್ರೇಡಿಂಗ್ ಹಗರಣ, 4600 ಡಿಜಿಟಲ್ ಫ್ರಾಡ್, 1725 ಡೇಟಿಂಗ್ ಹಗರಣಗಳು ವರದಿಯಾಗಿವೆ. ಎಲ್ಲಾ ಹಗರಣಗಳ ಮೂಲ ಆಗ್ನೇಯ ಏಷ್ಯಾ ನೆಲೆಯಾಗಿದೆ” ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಮಾಹಿತಿ ನೀಡಿದೆ. 2023 ರಲ್ಲಿ ಇಂಥದ್ದೇ ವಂಚನೆ ಸಂಬಂಧ 10 ಸಾವಿರ ಎಫ್ ಐ ಆರ್ ದಾಖಲಾಗಿದ್ದವು ಎಂಬ ಅಂಶ ರಾಷ್ಟ್ರೀಯ ಸೈಬರ್ ಕ್ರೈಂ ಪೋರ್ಟಲ್ ಬಹಿರಂಗಪಡಿಸಿದೆ.