ಟಿವಿ ಪ್ರೋಗಾಮಿನಲ್ಲಿ ಅವಕಾಶ ಮಾಡಿ ಕೊಡಿಸುತ್ತೇನೆ ಎಂದು ನಂಬಿಸಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮುಂಬಯಿಯಲ್ಲಿ ನಡೆದಿದೆ. 26 ವರ್ಷ ಪ್ರಾಯದ ಯುವತಿಗೆ ಆನ್‌ಲೈನ್‌ನಲ್ಲಿ ಆನಂದ್ ಎನ್ನುವವನ ಪರಿಚಯವಾಗಿದೆ. ಟಿವಿ ಉದ್ಯಮದ ಪ್ರಮುಖ ವ್ಯಕ್ತಿಗಳೊಂದಿಗೆ ತನಗೆ ಸಂಪರ್ಕವಿದೆ ಮತ್ತು ಕಪಿಲ್ ಶರ್ಮಾ ಶೋನಲ್ಲಿ ಕೆಲಸ ಕೊಡಿಸುವುದಾಗಿ ಆನಂದ್ ಯುವತಿಯನ್ನು ತನ್ನ ಬಣ್ಣಬಣ್ಣದ ಮಾತುಗಳಿಂದ ನಂಬಿಸಿದ್ದ. ಇದನ್ನು ನಂಬಿದ್ದ ಯುವತಿ ಅಡಿಷನ್ ನೀಡಲು ಆನಂದ್ ಹೇಳಿದ್ದ ವಿಳಾಸಕ್ಕೆ ಹೋಗಿದ್ದಾರೆ. ಅಡಿಷನ್ ಉತ್ತಮವಾದರೆ ಮುಂದೆ ಕಾಸ್ಟಿಂಗ್ ಡೈರೆಕ್ಟರ್ ಬಳಿ ಕರೆದುಕೊಂಡು ಹೋಗುತ್ತೇನೆ ಎಂದು ಆನಂದ್ ನಂಬಿಸಿದ್ದ.
ಅಡಿಷನ್ ಗೆಂದು ಯುವತಿ ಪಾಲ್ಘರ್ ಜಿಲ್ಲೆಯ ನಲಸೋಪಾರಾ ಪ್ರದೇಶದಲ್ಲಿರುವ ಆನಂದ್ ಮನೆಗೆ ಹೋಗಿದ್ದಾಳೆ. ಇದೇ ವೇಳೆ ಅಡಿಷನ್ ನೆಪದಲ್ಲಿ ಆನಂದ್ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದಾದ ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಆಕೆ ವಿರೋಧಿಸಿದಾಗ ದೈಹಿಕವಾಗಿ ಹಲ್ಲೆ ನಡೆಸಿ ಯಾರಿಗಾದರೂ ಹೇಳಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಸಂತ್ರಸ್ತೆ ಯುವತಿ ದೂರು ನೀಡಿದ್ದಾಳೆ. ಪೊಲೀಸರು ಅತ್ಯಾಚಾರ, ಕ್ರಿಮಿನಲ್ ಬೆದರಿಕೆಯ ಅಡಿಯಲ್ಲಿ ಆತನ ವಿರುದ್ದ ಎಫ್‌ಐಆರ್ ದಾಖಲಿಸಿ, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ ಎನ್ನಲಾಗಿದೆ.