ಹೆದ್ದಾರಿಗಳಲ್ಲಿ ಕಡಿಮೆ ದೂರಕ್ಕೂ ಹೆಚ್ಚಿನ ಶುಲ್ಕ ವಿಧಿಸುವ ಬಗ್ಗೆ ಪ್ರಯಾಣಿಕರ ಟೀಕೆಗಳು ಹೆಚ್ಚಾಗಿವೆ. ಇದರಿಂದಾಗಿ ವಾಹನಗಳು ಪ್ರಯಾಣಿಸುವ ದೂರಕ್ಕೆ ಅನುಗುಣವಾಗಿ ಟೋಲ್ ಸಂಗ್ರಹದ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ಪ್ರಸ್ತುತ ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಹೊಸ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂಗಾಗಿ (GNSS) ಸಂಪೂರ್ಣ ಚೌಕಟ್ಟನ್ನು ರಚಿಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಟೋಲ್ ಪ್ಲಾಜಾದಲ್ಲಿ ಟೋಲ್ ಪಾವತಿಸದೆ ಪರ್ಯಾಯ ತಂತ್ರಜ್ಞಾನದೊಂದಿಗೆ ಪ್ರಯಾಣಿಸಿದ ದೂರಕ್ಕೆ ಅನುಗುಣವಾಗಿ ಹಣ ಸಂಗ್ರಹಿಸಲು ಚಿಂತನೆ ನಡೆಸಿದೆ.
ಭಾರತದಾದ್ಯಂತ ಟೋಲ್ ಪ್ಲಾಜಾಗಳಲ್ಲಿ ಮುಂಬರಲಿರುವ ಹೊಸ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಮೂಲಕ, ಟೋಲ್ ಪಾವತಿಸುವ ವಾಹನಗಳಿಗೆ ಪ್ರತ್ಯೇಕ ಪಥಗಳನ್ನು ರಚಿಸಲು ಸರ್ಕಾರ ಯೋಜಿಸಿದೆ. ಅದೇ ಸಮಯದಲ್ಲಿ ಅಸ್ತಿತ್ವದಲ್ಲಿರುವ ಫಾಸ್ಟ್‌ಟ್ಯಾಗ್ ಶುಲ್ಕ ಸಂಗ್ರಹ ವ್ಯವಸ್ಥೆ ಕೂಡ ಇರುತ್ತದೆ. ಫಾಸ್ಟ್ಟ್ಯಾಗ್ ಬಳಸಿ ಪಾವತಿಸಲು ಬಯಸುವವರು ಶುಲ್ಕವನ್ನು ಪಾವತಿಸಿ ಪ್ರಯಾಣಿಸುವುದನ್ನು ಮುಂದುವರಿಸಬಹುದು. ಆದರೆ ಈ ಹೊಸ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಮೂಲಕ ಪಾವತಿಸಲು ಬಯಸುವವರಿಗೆ ಪ್ರತ್ಯೇಕ ರಿಯಾಯಿತಿ ನೀಡಲಾಗುವುದು. ಈ ವ್ಯವಸ್ಥೆ ಸಂಪೂರ್ಣ ಜಾರಿಗೆ ಬಂದ ಕೆಲವೇ ವರ್ಷಗಳಲ್ಲಿ ಭಾರತದ ಎಲ್ಲಾ ಟೋಲ್ ಪ್ಲಾಜಾಗಳನ್ನು ತೆಗೆದುಹಾಕುವ ಸಾಧ್ಯತೆಗಳಿವೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಈಗಾಗಲೇ ಹಲವಾರು ಬಾರಿ ಈ ಬಗ್ಗೆ ಮಾತನಾಡಿದ್ದಾರೆ. ಈ ತಂತ್ರಜ್ಞಾನವನ್ನು ಕಾರ್ಯಗತಗೊಳಿಸುವ ಸಲುವಾಗಿ, ಕೇಂದ್ರ ಸರ್ಕಾರವು ಈಗ ಭಾರತದಲ್ಲಿ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಎಂಬ ಹೊಸ ತಂತ್ರಜ್ಞಾನವನ್ನು ಜಾರಿಗೆ ತರುವ ಸಾಮರ್ಥ್ಯ ಹೊಂದಿರುವ ಕಂಪನಿಗಳಿಗೆ ಟೆಂಡರ್ ಆಹ್ವಾನಿಸಿದೆ.
ಇದಕ್ಕಾಗಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಬೇಕಾಗುವ ಸಾಫ್ಟ್‌ವೇರ್ ಮತ್ತು ಅದರ ಅನುಷ್ಠಾನ ಸೇರಿದಂತೆ ತಾಂತ್ರಿಕ ಉಪಕರಣಗಳ ಬಳಕೆ ಎರಡನ್ನೂ ಕಂಪನಿ ಮಾಡಬೇಕೆಂದು ಭಾರತ ಸರ್ಕಾರ ನಿರೀಕ್ಷಿಸುತ್ತಿದೆ. ಅರ್ಹ ಕಂಪನಿಗಳು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದರೆ, ಆ ಕಂಪನಿಯೊಂದಿಗೆ ಮಾತುಕತೆ ನಡೆಸಿದ ನಂತರ ಬಜೆಟ್ ಅನ್ನು ನಿಗದಿಪಡಿಸಲಾಗುತ್ತದೆ.