ಮಾಣಿ ಬಳಿ ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು. ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ.

ಕರಾವಳಿ

ವಿಟ್ಲ : ಮಾಣಿ ಗ್ರಾಮದಲ್ಲಿ ಹಾಡಹಗಲೇ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ, ನಗದು ಹಣ ಕಳ್ಳತನ ನಡೆಸಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಲ್ಲಿನ ಮಾಣಿ ಪಲಿಕೆ ನಿವಾಸಿ ಸುಜಯ್ ಎಂಬವರು ಶನಿವಾರ ಬೆಳಗ್ಗೆ ಮನೆಗೆ ಬೀಗ ಹಾಕಿ ಪೇಟೆಗೆ ಹೋಗಿದ್ದು ಮಧ್ಯಾಹ್ನ ಮರಳಿ ಬಂದಾಗ ಕಳ್ಳತನ ನಡೆದಿರುವುದು ಕಂಡುಬಂದಿದೆ. ಬಾಗಿಲಿನ ಬೀಗ ಒಡೆದು ಒಳನುಗ್ಗಿದ ಕಳ್ಳರು ಎರಡು ಕಪಾಟುಗಳನ್ನು ಮುರಿದು ಒಳಗಿದ್ದ 80ಸಾವಿರ ಮೌಲ್ಯದ ಚಿನ್ನದ ಚೈನು, 28ಸಾವಿರ ಮೌಲ್ಯದ ಕಿವಿಯ ಆಭರಣ, ಪಾಸ್ ಪೋರ್ಟ್ ಮತ್ತು ಹದಿನೈದು ಸಾವಿರ ನಗದು ಹಣ ಕಳ್ಳತನ ನಡೆಸಿ ಪರಾರಿಯಾಗಿದ್ದಾರೆ.

ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅ.ಕ್ರ.ಸಂಖ್ಯೆ 108/2024ಕಲಂ 454, 380 IPCಯಂತೆ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.