ನಟ ದರ್ಶನ್ ‘ಡಿ’ ಗ್ಯಾಂಗ್ ಬಂಧಿಸಿ ಅಸಲಿ ರಹಸ್ಯ ಭೇದಿಸಿದ್ದು ಮಂಗಳೂರಿನಲ್ಲಿ ಎಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸೂಪರ್ ಕಾಫ್ ಅಧಿಕಾರಿ.!

ರಾಜ್ಯ

ಇಬ್ಬರು ಪೊಲೀಸ್ ಅಧಿಕಾರಿಗಳು ‘ರೀಲ್ ಹೀರೊ’ನಾ ಬಂಧಿಸಿ ‘ರಿಯಲ್ ಹೀರೊ’ಗಳಾಗಿದ್ದಾರೆ.

ರಾಜ ಕಾಲುವೆಯಲ್ಲಿ ಕೊಚ್ಚಿ ಹೋಗಬೇಕಿದ್ದ ರೇಣುಕಾ ಸ್ವಾಮಿ ಹತ್ಯೆಯ ಅಸಲಿ ಸತ್ಯ ಭೇದಿಸಿ ಪ್ರಭಾವಿ ನಟ ದರ್ಶನ್ ನನ್ನು ಬಂಧಿಸುವಲ್ಲಿ ಯಶಸ್ವಿಯಾದ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್, ವಿಜಯನಗರ ಎಸಿಪಿ ಚಂದನ್ ಕುಮಾರ್ ಅವರ ದಿಟ್ಟ ಕಾರ್ಯ ವೈಖರಿ ಮೆಚ್ಚುಗೆಗೆ ಕಾರಣವಾಗಿದೆ.

ಕೊಲೆ ಮಾಡಿದ್ದೇವೆ ಎಂದು ನಾಲ್ವರ ಶರಣಾಗತಿ ಗೊತ್ತಾದ ಕೂಡಲೇ ಕಾಮಾಕ್ಷಿ ಪಾಳ್ಯ ಠಾಣೆಗೆ ಹೋಗಿದ್ದ ಡಿಸಿಸಿ ಗಿರೀಶ್ ಹಲವು ಆಯಾಮಗಳಲ್ಲಿ ತನಿಖೆ ನಡೆಸಲು ನಿರ್ಧರಿಸಿದ್ದರು. ಶರಣಾದ ಆರೋಪಿಗಳಿಂದ ಸತ್ಯ ಬಾಯ್ಬಿಡಿಸಲು ತಂತ್ರ ಅನುಸರಿಸುತ್ತಲೇ ಕೊಲೆಯ ಹಿಂದಿನ ಅಸಲಿಯತ್ತು ಬಯಲಾಗಿತ್ತು. ಅಷ್ಟೇ ಕ್ಷಿಪ್ರವಾಗಿ ತಾಂತ್ರಿಕ ಅಂಶಗಳ ಅನ್ವಯ ಎಸಿಪಿ ಚಂದನ್ ಕುಮಾರ್ ನೇತೃತ್ವದ ತಂಡ ತನಿಖೆಗೆ ಇಳಿದಾಗ ನಟ ದರ್ಶನ್ ಹಾಗೂ ಇತರರು ಕೃತ್ಯದಲ್ಲಿ ಭಾಗಿಯಾಗಿರುವುದು ಗೊತ್ತಾಗಿತ್ತು.

ಈ ಮಾಹಿತಿ ಬಯಲಾಗುತ್ತಲೇ ಪೂರಕ ಸಾಕ್ಷ್ಯಾಧಾರಗಳನ್ನು ಮುಂದಿಟ್ಟುಕೊಂಡೇ ಮೈಸೂರಿಗೆ ತೆರಳಿದ ಎಸಿಪಿ ಚಂದನ್, ಜಿಮ್ ಮುಗಿಸಿ ಬಂದಿದ್ದ ನಟ ದರ್ಶನ್ ನನ್ನು ಜೀಪು ಹತ್ತುವಂತೆ ಹೇಳಿದ್ದರು. ನನ್ನದೇ ಐಷಾರಾಮಿ ಕಾರಿನಲ್ಲಿ ಬರುವುದಾಗಿ ದರ್ಶನ್ ಹೇಳಿದಾಗ, ಪೊಲೀಸ್ ಭಾಷೆಯಲ್ಲಿ ಉತ್ತರಿಸಿ ಜೀಪು ಹತ್ತಿಸಿಕೊಂಡು ಬಂದಿದ್ದರು.

ಐಪಿಎಸ್ ಅಧಿಕಾರಿ ಡಿಸಿಪಿ ಗಿರೀಶ್ ಈ ಹಿಂದೆ ಲೋಕಾಯುಕ್ತ ಎಸ್ಪಿ ಆಗಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರದ ಉರುಳಿನಲ್ಲಿ ಸಿಲುಕಿದ ಮಾಜಿ ಮುಖ್ಯಮಂತ್ರಿ, ಕಾರ್ಪೋರೇಟರ್, ಅಂದಿನ ಶಾಸಕ ಸೇರಿ ಹಲವರು ಪ್ರಭಾವಿಗಳ ಬಂಧನದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು. ಒತ್ತಡಕ್ಕೆ ಮಣಿಯದೆ, ಯಾರ ಮುಲಾಜಿಲ್ಲದೆ ಪ್ರಭಾವಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅವರ ಕಾರ್ಯವೈಖರಿ ಇಲಾಖೆಯಲ್ಲಿ ಚಾಲ್ತಿಯಲ್ಲಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ಪೊಲೀಸ್ ಅಧಿಕಾರಿಗಳ ಮುಂದೆ ನಾಲ್ಕು ಮಂದಿ ಬಂದು ಶರಣಾಗಾಗಿದ್ದರು. ಹಣಕಾಸಿನ ವಿಷಯಕ್ಕೆ ರೇಣುಕಾಸ್ವಾಮಿಯನ್ನು ಕೊಂದಿದ್ದು ನಾವೇ ಅಂತ ಒಪ್ಪಿಕೊಂಡಿದ್ದರು. ಠಾಣಾ ಮಟ್ಟದ ಅಧಿಕಾರಿಗಳು ನಂಬಿದರೂ, ಡಿಸಿಪಿ ಗಿರೀಶ್ ರವರು ಶರಣಾದ ಆರೋಪಿಗಳ ವಾದವನ್ನು ಒಪ್ಪುವುದಕ್ಕೆ ರೆಡಿಯಿರಲಿಲ್ಲ. ಇಲ್ಲೇನೋ ಮಿಸ್ ಹೊಡೆಯುತ್ತಿದೆ ಎಂಬ ಅವರಿಗೆ ಸಂಶಯ ಮೂಡಿತು.

ಶರಣಾದವರನ್ನು ತಮ್ಮದೇ ಸ್ಟೈಲ್‌ನಲ್ಲಿ ವಿಚಾರಣೆ ಮಾಡುವುದಕ್ಕೆ ಶುರು ಮಾಡಿದರು ಡಿಸಿಪಿ ಗಿರೀಶ್. ಆಗಲೇ, ಆರೋಪಿಗಳು ರೇಣುಕಾಸ್ವಾಮಿಯ ಹಿಂದಿನ ಅಸಲಿ ಸತ್ಯವನ್ನು ಹೊರಹಾಕಿದ್ದರು. ಸ್ಯಾಂಡಲ್‌ವುಡ್‌ನ ಸೂಪರ್‌ಸ್ಟಾರ್ ದರ್ಶನ್ ಹೆಸರನ್ನು ಬಾಯಿ ಬಿಟ್ಟಿದ್ದರು. ರೇಣುಕಾಸ್ವಾಮಿ ಕೊಲೆ ಯಾಕೆ ಆಯ್ತು.? ದರ್ಶನ್ ಯಾಕೆ ಬಂದ್ರು.? ಏನು ಮಾಡಿದರು.? ಅನ್ನೋ ಅಸಲಿ ಸತ್ಯವನ್ನು ಗಿರೀಶ್ ಮುಂದೆ ಬಿಚ್ಚಿಟ್ಟರು ಶರಣಾದ ಆರೋಪಿಗಳು.

ಈ ಕೊಲೆ ಪ್ರಕರಣ ಪ್ರಾರಂಭಿಕ ಹಂತದಲ್ಲಿಯೇ ಮುಚ್ಚಿ ಹೋಗುವ ಎಲ್ಲಾ ಸಾಧ್ಯತೆಗಳೂ ಇತ್ತು. ಒಂದು ವೇಳೆ ಡಿಸಿಪಿ ಗಿರೀಶ್, ಎಸಿಪಿ ಚಂದನ್ ಕುಮಾರ್ ಹಾಗೂ ಪೊಲೀಸ್ ಕಮಿಷನರ್ ಬಿ. ದಯಾನಂದ್ ರವರು ಇರದೇ ಹೋಗಿದ್ದರೆ, ಈ ಕೇಸನ ಅಸಲಿ ಸತ್ಯ ಬೆಳಕಿಗೆ ಬರುತ್ತಿರಲಿಲ್ಲ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಹೊರಬಂತೋ, ಆಗಲೇ ಡಿಸಿಪಿ ಗಿರೀಶ್ ದರ್ಶನ್ ಬಂಧನಕ್ಕೆ ಸ್ಕೆಚ್ ರೆಡಿ ಮಾಡಿ, ಇವರೊಂದಿಗೆ ವಿಜಯನಗರ ಪೊಲೀಸ್ ಠಾಣೆಯ ಎಸಿಪಿ ಚಂದನ್ ಕುಮಾರ್ ಹಾಗೂ ಪೊಲೀಸ್ ಕಮಿಷನರ್ ಬಿ. ದಯಾನಂದ್ ಪ್ಲ್ಯಾನ್ ಮಾಡಿದ್ದರು. ಈ ವೇಳೆ ತಮ್ಮ ಮೇಲೆ ಪ್ರಭಾವಿ ವ್ಯಕ್ತಿಗಳಿಂದ ಒತ್ತಡ ಬರುತ್ತೆ ಅನ್ನೋದು ಅವರಿಗೂ ಮನವರಿಕೆಯಾಗಿತ್ತು. ಅದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡೇ ಅಖಾಡಕ್ಕೆ ಇಳಿದಿದ್ದರು.

ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಗಿರೀಶ್ ಪೊಲೀಸ್ ಇಲಾಖೆಗೆ ಸೇರಿ ಖಾಕಿ ತೊಟ್ಟು ಸಾರ್ವಜನಿಕರ ಸೇವೆಗೆ ಬಂದಿದ್ದಾರೆ. ಸದ್ಯ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಗಿರೀಶ್ ಹೈಪ್ರೊಫೈಲ್ ಕೇಸ್‌ಗಳನ್ನು ಹ್ಯಾಂಡಲ್ ಮಾಡಿದ್ದಾರೆ. ರಾಜಕೀಯ ವ್ಯಕ್ತಿಗಳನ್ನು, ಉನ್ನತ ಮಟ್ಟದ ಅಧಿಕಾರಿಗಳನ್ನು ಬಂಧಿಸಿ ಹೆಸರುವಾಗಿಯಾಗಿದ್ದಾರೆ. 2011ರಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನೂ ಬಂಧಿಸಿದ್ದು ಇದೇ ಗಿರೀಶ್. ಮಂಗಳೂರಿನ ಪಣಂಬೂರು ಉಪ-ವಿಭಾಗದಲ್ಲಿ ಎಸಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಮಯದಲ್ಲಿ ಇಲ್ಲಿನ ಕೋಮುವಾದಿಗಳ, ಆಯಿಲ್ ಮಾಫಿಯಾಗಳ, ದೋ ನಂಬ್ರ ದಂಧೆಕೋರರ, ಮರಳು ಮಾಪಿಯಾದಾರರ ಹುಟ್ಟಡಗಿಸಿದ ನಿಷ್ಠಾವಂತ ಸೂಪರ್ ಕಾಪ್, ಡೈನಾಮಿಕ್ ಅಧಿಕಾರಿ ಗಿರೀಶ್.

ಡಿಸಿಪಿ ಗಿರೀಶ್ ಹಾಗೂ ಎಸಿಪಿ ಚಂದನ್ ಕುಮಾರ್ ಇಬ್ಬರೂ ಸೇರಿ ಶರಣಾದವರನ್ನು ಬೆಂಡೆತ್ತಿದ್ದರು. ದರ್ಶನ್ ಬಂಧನಕ್ಕೆ ಎಸಿಪಿ ಚಂದನ್ ಕುಮಾರ್ ಅವರ ನೇತೃತ್ವದ ತಂಡವನ್ನು ನಿಯೋಜನೆ ಮಾಡಿ ಮೈಸೂರಿಗೆ ಕಳುಹಿಸಲಾಯಿತು. ಸೀದಾ ಮೈಸೂರಿಗೆ ತೆರಳಿದ ಎಸಿಪಿ ಚಂದನ್ ಕುಮಾರ್ ತಂಡ ಜಿಮ್‌ನಲ್ಲಿದ್ದ ದರ್ಶನ್‌ ಬಂಧನಕ್ಕೆ ಮುಂದಾಗಿತ್ತು. ಆ ವೇಳೆ ದರ್ಶನ್ ತಮ್ಮದೇ ಕಾರಿನಲ್ಲಿ ಬರುತ್ತೇನೆ ಅಂತ ಹಠ ಹಿಡಿದಿದ್ದರು. ಅದನ್ನು ಕೇಳದ ಎಸಿಪಿ ಚಂದನ್ ಕುಮಾರ್ ಚಾಲೆಂಜಿಂಗ್ ಸ್ಟಾರ್‌ರನ್ನು ಬಂಧಿಸಿ ಕರೆತಂದಿದ್ದರು. ದರ್ಶನ್ ಬಂಧನದ ವಿಷಯ ತಿಳಿಯುವ ಹೊತ್ತಿಗಾಗಲೇ ರಾಜಕೀಯ ಮುಖಂಡರಿಂದ ಒತ್ತಡ ಬಂದಿದ್ದವು. ಆದರೆ, ಅದ್ಯಾವುದಕ್ಕೂ ಇವರು ಕ್ಯಾರೆ ಅನ್ನಲಿಲ್ಲ. ಮಿಂಚಿನ ವೇಗದಲ್ಲಿ ಸಾಕ್ಷಿಗಳನ್ನು ಸಂಗ್ರಹಿಸಿ ದರ್ಶನ್ ವಿರುದ್ಧ ಕೇಸ್ ದಾಖಲಿಸಿದ್ದರು. ಹೀಗಾಗಿ ಈ ಇಬ್ಬರು ಪೊಲೀಸ್ ಅಧಿಕಾರಿಗಳು ‘ರೀಲ್ ಹೀರೊ’ನಾ ಬಂಧಿಸಿ ‘ರಿಯಲ್ ಹೀರೊ’ಗಳಾಗಿದ್ದಾರೆ.