ಮಂಗಳೂರು: ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಘಟಿಕೋತ್ಸವ ಕಾರ್ಯಕ್ರಮ ರಾಜ್ಯಪಾಲರ ರಾಜ್ಯಭಾರಕ್ಕೆ ಸಾಕ್ಷಿಯಾಗಿ ವಿವಾದ ಹುಟ್ಟುಹಾಕಿದೆ. ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ವೇದಿಕೆಯಲ್ಲಿ ಕುಳಿತು ತಮಗೆ ಬೇಕಾದಂತೆ ಕಾರ್ಯಕ್ರಮದ ಶಿಷ್ಟಾಚಾರ ಬದಲಿಸಲು ನಿರ್ದೇಶಿಸುತ್ತಲೇ ಇದ್ದರು. ಇದರಿಂದ ಮುಜುಗರಕ್ಕೀಡಾದ ವಿವಿ ಉಪ ಕುಲಪತಿ ಡಾ.ಪಿ.ಎಲ್.ಧರ್ಮ ವೇದಿಕೆಯಲ್ಲೇ ಕಣ್ಣೀರು ಹಾಕಿದರು.
ಘಟಿಕೋತ್ಸವವನ್ನು ಪೂರ್ವ ಶಿಷ್ಟಾಚಾರದಂತೆ ನಡೆಸಲು ವಿವಿ ಆಡಳಿತ ಸಿದ್ಧತೆ ನಡೆಸಿತ್ತು. ಆದರೆ ರಾಜ್ಯಪಾಲರ ದರ್ಬಾರ್ನಿಂದ ಇದು ಸಾಧ್ಯವಾಗಲಿಲ್ಲ. ಘಟಿಕೋತ್ಸವದ ಕೊನೆಯಲ್ಲಿ ಹಾಡಬೇಕಿದ್ದ ರಾಷ್ಟ್ರಗೀತೆಯನ್ನು ಗವರ್ನರ್ ಆರಂಭದಲ್ಲೇ ಹಾಡಲು ಸೂಚಿಸಿದರು. ಒಂದೂವರೆ ಗಂಟೆಯ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ ವಿವಿ ಉಪ ಕುಲಪತಿ, ಪರೀಕ್ಷಾಂಗ ಕುಲಸಚಿವರಿಗೆ ಆಗಾಗ ಮೌಖಿಕ ನಿರ್ದೇಶನ ನೀಡುತ್ತಲೇ ಇದ್ದರು.
ಪಿಎಚ್.ಡಿ ಪದವಿಯನ್ನು ರಾಜ್ಯಪಾಲರೇ ನೀಡುವುದು ಶಿಷ್ಟಾಚಾರ, ಆದರೆ ಈ ಬಾರಿ ಸಂಶೋಧನಾರ್ಥಿಗಳಿಗೆ ಪಿಎಚ್.ಡಿ ಪ್ರಮಾಣಪತ್ರವನ್ನು ಕಾರ್ಯಕ್ರಮದ ಮೊದಲೇ ಹಂಚಿ, ನಂತರ ಎಲ್ಲರನ್ನೂ ವೇದಿಕೆಗೆ ಕರೆದು ರಾಜ್ಯಪಾಲರು ಫೋಟೋ ತೆಗೆಸಿಕೊಂಡರು. ಈ ಮಧ್ಯೆ ರಾಜ್ಯಪಾಲರ ಅಂಗರಕ್ಷಕನೊಬ್ಬ ವೇದಿಕೆಯಲ್ಲಿ ನಿಂತು ಏರುದನಿಯಲ್ಲೇ ವಿವಿ ಸಿಬ್ಬಂದಿಗೆ ಫೋಟೋ ತೆಗೆಯದಂತೆ ತಾಕೀತು ಮಾಡುತ್ತಿದ್ದ. ಸುದ್ದಿ ಮಾಧ್ಯಮದ ಓರ್ವ ಫೋಟೋಗ್ರಾಫರನ್ನು ತಳ್ಳಿದ ಪ್ರಸಂಗವೂ ನಡೆಯಿತು.
ರಾಜ್ಯಪಾಲರ ನಡೆಗೆ ಕಸಿವಿಸಿಗೊಂಡ ವಿವಿ ಉಪ ಕುಲಪತಿ ಡಾ. ಪಿ.ಎಲ್.ಧರ್ಮ ವೇದಿಕೆಯಲ್ಲೇ ಕಣ್ಣೀರು ಹಾಕಿದರು. ರಾಜ್ಯಪಾಲರು ಸಭೆಯುದ್ದಕ್ಕೂ ಕುಳಿತಲ್ಲೇ ಮಾತನಾಡುತ್ತಿದ್ದು, ಸಭಾಂಗಣದಲ್ಲಿದ್ದ ಹಲವರ ಆಕ್ರೋಶಕ್ಕೆ ಕಾರಣವಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್, ಬಿಜೆಪಿ ಮುಖಂಡರು, ವಿವಿ ವಿದ್ಯಾರ್ಥಿಗಳು ರಾಜ್ಯಪಾಲರ ನಡೆ ಬಗ್ಗೆ ಅಸಮಾಧಾನ ಹೊರಹಾಕಿದರು.