ರಾಜ್ಯಾದ್ಯಂತ ವೆಜ್, ಚಿಕನ್, ಫಿಶ್ ಕಬಾಬ್ ತಯಾರಿಕೆ ವೇಳೆ ಕೃತಕ ಬಣ್ಣ ಬಳಕೆ ನಿಷೇಧ; ಉಲ್ಲಂಘಿಸಿದರೆ ಜೀವಾವಧಿ ಶಿಕ್ಷೆ

ರಾಜ್ಯ

ಗೋಬಿ ಮಂಚೂರಿಗೆ ಕೃತಕ ಬಣ್ಣ ಉಪಯೇಗದ ಬ್ಯಾನ್ ಹೇರಿದ ಬೆನ್ನಲ್ಲೇ ಇದೀಗ ಕಬಾಬ್‌ಗಳಿಗೂ ಕೃತಕ ಬಣ್ಣ ಬಳಸದಂತೆ ರಾಜ್ಯ ಸರ್ಕಾರ ನಿಷೇಧ ಹೇರಿದೆ. ಆಹಾರ ಸುರಕ್ಷತೆ ವಿಚಾರದಲ್ಲಿ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ. ಮೀನು ಸೇರಿದಂತೆ ಚಿಕನ್ ಕಬಾಬ್ ಆಹಾರದಲ್ಲಿ ಕೃತಕ ಬಣ್ಣ ಬೆರಸುವುದನ್ನು ನಿಷೇಧಿಸಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ. ಕೆಲವು ಆಹಾರಕ್ಕೆ ಕೃತಕ ಬಣ್ಣದ ಬಳಕೆ ಮಾಡುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದೆ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ನಿಷೇಧ ಮಾಡಲಾಗಿತ್ತು.

ಇದೀಗ ಚಿಕನ್ ಕಬಾಬ್ ಗಳಲ್ಲೂ ಕೃತಕ ಬಣ್ಣಗಳ ಬೆರಸುವಿಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಪರೀಕ್ಷೆಗೊಳಪಡಿಸಿ ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವರು, ಆಹಾರ ಸುರಕ್ಷತಾ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದರು. ಕಳಪೆ ಗುಣಮಟ್ಟದ ಆಹಾರ ಸೇವನೆ ಇತ್ತೀಚೆಗೆ ಜನರ ಆರೋಗ್ಯದ ಮೇಲೆ ತೀವ್ರ ಹಾನಿಯನ್ನುಂಟುಮಾಡುತ್ತಿದೆ. ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಹಾನಿಕಾರಕ ಆಹಾರದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸಚಿವರ ಸೂಚನೆಯ ಮೇರೆಗೆ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‌ಗಳು ಗುಣಮಟ್ಟ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಚಿಕನ್ ಕಬಾಬ್ ಕಳಪೆಯಾಗಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಚಿಕನ್ ಕಬಾಬ್, ಆಹಾರಗಳಿಗೆ ಕೃತಕ ಬಣ್ಣ ಬೆರಸುವಿಕೆಯನ್ನು ನಿಷೇಧಿಸಿ ಆಹಾರ ಸುರಕ್ಷತಾ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಆಹಾರ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆ ಮಾಡಲಾಗುತ್ತಿರುವುದು ಪ್ರಯೋಗಾಲಯಗಳ ಮೂಲಕ ನಡೆಸಲಾದ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಕೃತಕ ಬಣ್ಣಗಳು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೆಜ್, ಚಿಕನ್, ಫಿಶ್ ಕಬಾಬ್ ತಯಾರಿಕೆ ವೇಳೆ ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆಹಾರ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದಕ್ಕೆ ಅವಕಾಶವಿಲ್ಲ ಎಂದು ಆದೇಶದಲ್ಲಿ‌ ತಿಳಿಸಲಾಗಿದೆ. ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ತಯಾರಿಸುವವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು ರೂ. ಹತ್ತು ಲಕ್ಷಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ