ಮೊಬೈಲ್ ನಂಬರ್ ಪೋರ್ಟೆಬಿಲಿಟಿ ನಿಯಮಗಳಿಗೆ ತಿದ್ದುಪಡಿ; ಜುಲೈ 1 ರಿಂದ ಜಾರಿ: ಟೆಲಿಕಾಂ ನಿಯಂತ್ರಣ ಪ್ರಾಧಿಕಾರ

ರಾಷ್ಟ್ರೀಯ

ಮೊಬೈಲ್ ನಂಬರ್ ಪೋರ್ಟೆಬಿಲಿಟಿ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಹೇಳಿದೆ. ಟ್ರಾಯ್ ಕಳೆದ ವಾರ ತನ್ನ ಮೊಬೈಲ್ ನಂಬರ್ ಪೋರ್ಟೆಬಿಲಿಟಿ ನಿಯಮಗಳಲ್ಲಿ ಬದಲಾವಣೆಗಳನ್ನು ಪ್ರಕಟಿಸಿದೆ. ಇತ್ತೀಚಿನ ತಿದ್ದುಪಡಿಯ ಪ್ರಕಾರ, ಸಿಮ್ ಕಾರ್ಡ್ ಅನ್ನು ಬದಲಾಯಿಸಿದರೆ ಸಂಬಂಧಿತ ಮೊಬೈಲ್ ಸಂಖ್ಯೆಯನ್ನು ಏಳು ದಿನಗಳವರೆಗೆ ಬೇರೆ ಟೆಲಿಕಾಂ ಆಪರೇಟರ್‌ಗೆ ಪೋರ್ಟ್ ಮಾಡಲು ಸಾಧ್ಯವಿಲ್ಲ.

ಈ ಹಿಂದೆ ಸಿಮ್ ಸ್ವಾಪ್ ಬಳಿಕ 10 ದಿನ ಕಾಯಬೇಕಿತ್ತು. ಆದರೆ ಇತ್ತೀಚಿನ ತಿದ್ದುಪಡಿಯಲ್ಲಿ ಅದನ್ನು ಏಳು ದಿನಗಳಿಗೆ ಇಳಿಸಲಾಗಿದೆ. ಇನ್ನು ಮುಂದೆ, ಏಳು ದಿನಗಳಲ್ಲಿ ಸಂಖ್ಯೆಯನ್ನು ಬದಲಾಯಿಸಲು ವಿಶಿಷ್ಟ ಪೋರ್ಟಿಂಗ್ ಕೋಡ್ ಅನ್ನು ನಿಯೋಜಿಸಲಾಗಿದೆ. 10 ದಿನ ಕಾಯುವುದರಿಂದ ಈ ಸಮಯವು ಚಂದಾದಾರರಿಗೆ ತೊಂದರೆ ಉಂಟುಮಾಡುತ್ತಿದೆ. ಹೀಗಾಗಿ 2-4 ದಿನಗಳು ಸಾಕು ಎಂದು ಎಂದು ಕೆಲವು ಟೆಲಿಕಾಂ ಸಂಸ್ಥೆಗಳು ಅಭಿಪ್ರಾಯಪಟ್ಟಿದ್ದವು.

ಎಂಎನ್​ಪಿ ನಿಯಮಾವಳಿಗಳು ಪ್ರಾರಂಭವಾದ ನಂತರ ಇದು ಒಂಬತ್ತನೇ ಹೊಸ ತಿದ್ದುಪಡಿಯಾಗಿದೆ. ಹೊಸ ನಿಯಮಗಳು ದೇಶದಲ್ಲಿ ಸಿಮ್ ಸ್ವಾಪ್ ವಂಚನೆಯನ್ನು ತಡೆಗಟ್ಟುವ ಮತ್ತು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ ಎಂದು ಟ್ರಾಯ್ ಅಭಿಪ್ರಾಯಪಟ್ಟಿದೆ.