ಹೊಂದಾಣಿಕೆ ರಾಜಕೀಯ, ಪಕ್ಷ ಮತ್ತು ಸರ್ಕಾರ ಮಧ್ಯೆ ಸಮನ್ವಯದ ಕೊರತೆ, ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ತುಂಬುವ ಮೊದಲೇ ಗಂಭೀರವಾಗಿ ಕೇಳಿ ಬಂದ ಭ್ರಷ್ಟಾಚಾರ ಆರೋಪ, ಅಂಕೆ ದಾಟಿದ ಕುಟುಂಬ ರಾಜಕರಣವೇ
ಲೋಕಸಭೆ ಚುನಾವಣೆಯ ಸೋಲಿಗೆ ಕಾಂಗ್ರೆಸ್ ನಾಯಕರು ಮುಂದಿಟ್ಟ ಕಾರಣಗಳು. ಸೋಲಿನ ಪರಾಮರ್ಶೆ ಎಐಸಿಸಿ ನಾಯಕ ಮಧುಸೂದನ್ ಮಿಸ್ತ್ರಿ ನೇತೃತ್ವದಲ್ಲಿ ರಚಿಸಲಾದ ಸತ್ಯ ಶೋಧನಾ ಸಮಿತಿ ಮುಂದೆ ಕಾಂಗ್ರೆಸ್ ನಾಯಕರು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಸಚಿವರು, ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು ಅಭಿಪ್ರಾಯ ಹಂಚಿಕೊಂಡರು.
ವಿಧಾನಸಭೆ ಚುನಾವಣೆಯಲ್ಲಿ ಮುನ್ನಡೆ ತಂದುಕೊಟ್ಟ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಹಿಂದೆ ಬಿದ್ದಿದ್ದಾರೆ. ಸಚಿವರು ತಾವು ಪ್ರತಿನಿಧಿಸುವ ಕ್ಷೇತ್ರಗಳಲ್ಲಿಯೂ ಮುನ್ನಡೆ ತಂದುಕೊಡಲು ವಿಫಲರಾಗಿದ್ದಾರೆ. ಮುನ್ನಡೆ ತಂದುಕೊಡಲು ವಿಫಲರಾದ ಸಚಿವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂಬ ಅಭಿಪ್ರಾಯವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ ಎಂದೂ ಗೊತ್ತಾಗಿದೆ. ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಜೊತೆ ‘ಹೊಂದಾಣಿಕೆ ರಾಜಕೀಯ’ದ ಕಾರಣಕ್ಕೆ ಪಕ್ಷದ ಅಭ್ಯರ್ಥಿ ಸೋಲು ಕಾಣುವಂತಾಯಿತು. ಗೆಲ್ಲಲು ಹೆಚ್ಚಿನ ಅವಕಾಶಗಳಿದ್ದ ಕ್ಷೇತ್ರಗಳನ್ನು ಪಕ್ಷ ಕಳೆದುಕೊಳ್ಳಲು ಕೇವಲ ಒಕ್ಕಲಿಗ- ಲಿಂಗಾಯತ ಜಾತಿ ಸಮೀಕರಣವಷ್ಟೆ ಕಾರಣವಲ್ಲ. ಸ್ಥಳೀಯ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದರಿಂದಲೇ ಸೋಲು ಉಂಟಾಗಿದೆ ಎಂಬ ವಿಚಾರವನ್ನು ಸಮಿತಿಯ ಮುಂದೆ ಕೆಲವು ನಾಯಕರು ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
‘ಗ್ಯಾರಂಟಿ’ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೂ ಚುನಾವಣೆಯಲ್ಲಿ ಅದರ ಲಾಭ ಪಡೆಯಲು ಪಕ್ಷಕ್ಕೆ ಸಾಧ್ಯವಾಗಿಲ್ಲ. ಈ ಯೋಜನೆಗಳು ಮನೆ, ಮನೆ ತಲುಪಿದ ಬಗ್ಗೆ ಸರಿಯಾದ ರೀತಿಯಲ್ಲಿ ಪ್ರಚಾರ ಮಾಡಲಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷ ನಾಯಕರಿಗೆ ಕಾರ್ಯಕರ್ತರು ನೆನಪಾಗಿದ್ದಾರೆ. ಉಸ್ತುವಾರಿ ಸಚಿವರು ಶಾಸಕರ ಮಾತುಗಳಿಗೆ ಬೆಲೆ ಕೊಡುತ್ತಿಲ್ಲ.ಕಾರ್ಯಕರ್ತರ ಮಾತನ್ನೂ ಕೇಳುವವರು ಯಾರೂ ಇಲ್ಲ. ಈ ಎಲ್ಲ ವಿಷಯಗಳು ಚುನಾವಣೆಯಲ್ಲಿ ಫಲಿತವಾಗಿದೆ ಎಂದು ಕೆಲವರು ಅಭಿಪ್ರಾಯ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.