2060 ರ ದಶಕದ ಹೊತ್ತಿಗೆ ಭಾರತದ ಜನಸಂಖ್ಯೆ 170 ಕೋಟಿ ತಲುಪಿ, ನಂತರ ಶೇಕಡಾ 12 ರಷ್ಟು ಕುಸಿತ ದಾಖಲಿಸಲಿದೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶವಾಗಿ ಗುರುತಿಸಿಕೊಳ್ಳಲಿದೆ

ರಾಷ್ಟ್ರೀಯ

2060 ರ ದಶಕದ ಹೊತ್ತಿಗೆ ಭಾರತದ ಜನಸಂಖ್ಯೆಯು ಸುಮಾರು 170 ಕೋಟಿ ತಲುಪಲಿದ್ದು, ನಂತರ ಶೇಕಡಾ 12 ರಷ್ಟು ಕುಸಿತ ದಾಖಲಿಸಿದೆ. ಆದಾಗ್ಯೂ ಶತಮಾನದುದ್ದಕ್ಕೂ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶವಾಗಿ ಗುರುತಿಸಿಕೊಳ್ಳಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

‘ವರ್ಲ್ಡ್ ಪಾಪ್ಯುಲೇಷನ್ ಪ್ರಾಸ್ಪೆಕ್ಟಸ್-2024 ರ ವರದಿಯನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದೆ. “ಮುಂಬರುವ 50-60 ವರ್ಷಗಳಲ್ಲಿ ಜಗತ್ತಿನ ಜನಸಂಖ್ಯಾ ಬೆಳವಣಿಗೆ ಹೀಗೆಯೇ ಮುಂದುವರಿಯುವ ನಿರೀಕ್ಷೆ ಇದೆ. 2080 ರ ದಶಕದ ಮಧ್ಯಭಾಗದಲ್ಲಿ ವಿಶ್ವದ ಜನಸಂಖ್ಯೆ ಸುಮಾರು 10.3 ಶತಕೋಟಿ ತಲುಪುವ ಅಂದಾಜಿದೆ. ಉತ್ತುಂಗಕ್ಕೇರಿದ ನಂತರ, ಕ್ರಮೇಣ ಕ್ಷೀಣಿಸಲು ಪ್ರಾರಂಭಿಸುತ್ತದೆ. ಶತಮಾನದ ಅಂತ್ಯದ ವೇಳೆಗೆ ಜನಸಂಖ್ಯೆಯು 10.2 ಶತಕೋಟಿಗೆ ಇಳಿಯುತ್ತದೆ” ಎಂದು ವರದಿ ತಿಳಿಸಿದೆ.

ಕಳೆದ ವರ್ಷ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಭಾರತವು 2100 ರವರೆಗೂ ಅದೇ ಸ್ಥಾನದಲ್ಲಿ ಮುಂದುವರಿಯುವ ನಿರೀಕ್ಷೆ ಇದೆ.

“2054 ರ ವೇಳೆಗೆ ಭಾರತವೂ ಸೇರಿದಂತೆ ಸುಮಾರು 100 ರಾಷ್ಟ್ರಗಳಲ್ಲಿ ದುಡಿಯುವ ವರ್ಗದ ಜನಸಂಖ್ಯೆಯು ( 20 ರಿಂದ 64 ವರ್ಷ ವಯಸ್ಸಿನ ಜನರು) ಹೆಚ್ಚಲಿದೆ. ದೇಶದ ಅಭಿವೃದ್ಧಿಯಲ್ಲಿ ಈ ದುಡಿಯುವ ವರ್ಗದ ಪಾತ್ರ ಹೆಚ್ಚಲಿದೆ. ಈ ವರ್ಗದ ಜನರ ಸಾಮರ್ಥ್ಯ ಬಳಸಿಕೊಳ್ಳಲು ಎಲ್ಲ ರಾಷ್ಟ್ರಗಳು ಶಿಕ್ಷಣ, ಆರೋಗ್ಯ ಮತ್ತು ಮೂಲ ಸೌಕರ್ಯ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನಿಸಿ ಆ ಮೂಲಕ ಉದ್ಯೋಗ ಸೃಷ್ಟಿಗೆ ಪ್ರಯತ್ನಿಸಬೇಕು” ಎಂದು ವರದಿ ಸಲಹೆ ನೀಡಿದೆ.