ಸಾರ್ವಜನಿಕ ಪ್ರದೇಶಗಳಲ್ಲಿ ಬೆಳಗ್ಗೆ ಹಾಗೂ ಸಾಯಂಕಾಲ ಐದು ಗಂಟೆ ಸಮವಸ್ತ್ರದಲ್ಲಿ ಪೊಲೀಸರು ಕಡ್ಡಾಯವಾಗಿ ಗಸ್ತು ತಿರುಗಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಅಲೋಕ್ ಮೋಹನ್ ಆದೇಶಿಸಿದ್ದಾರೆ.
ರಾಜ್ಯದ ಪೊಲೀಸರ ಕಾರ್ಯನಿರ್ವಹಣೆ ಕುರಿತು 20 ಸ್ಪಷ್ಟ ಸೂಚನೆಗಳನ್ನು ನೀಡಿರುವ ಡಿಜಿಪಿ, ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ತಡೆಯುವ ಸಲುವಾಗಿ ಸಾರ್ವಜನಿಕ ಪ್ರದೇಶದಲ್ಲಿ ಪ್ರತಿನಿತ್ಯ ಬೆಳಗ್ಗೆ 9 ರಿಂದ 11 ಹಾಗೂ ಸಂಜೆ 6 ರಿಂದ ರಾತ್ರಿ 9 ರವರೆಗೆ ಸಮವಸ್ತ್ರ ಧರಿಸಿ ಗಸ್ತು ತಿರುಗಬೇಕು ಎಂದು ನಿರ್ದೇಶಿಸಿದ್ದಾರೆ.
ಕಮೀಷನರ್ ವ್ಯಾಫ್ತಿಯ ಡಿಸಿಪಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿದಿನ ಕನಿಷ್ಠ ಒಂದು ಪೊಲೀಸ್ ಠಾಣೆಗೆ ಭೇಟಿ ನೀಡಬೇಕು. ಠಾಣೆಗಳಿಗೆ ‘ಡಿಕಾಯ್’ ಕಳಿಸಿ ಅಲ್ಲಿನ ಕಾರ್ಯವೈಖರಿಯ ವಾಸ್ತವ ತಿಳಿದುಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.
ಆಯಾ ವಲಯದ ಐಜಿಪಿ ಗಳು, ಡಿಐಜಿಪಿಗಳು ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರೂ ತಮ್ಮ ವ್ಯಾಪ್ತಿಯ ಠಾಣೆಗಳಿಗೆ ಭೇಟಿ ನೀಡಬೇಕು. ಭೇಟಿ ಸಂದರ್ಭದಲ್ಲಿ ಕಾರ್ಯನಿರ್ವಹಣೆ ಪರಿಶೀಲಿಸಬೇಕು. ಅಲ್ಲದೆ, ಪ್ರಮುಖ ಅಪರಾಧ ಪ್ರಕರಣಗಳು ನಡೆದಾಗ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಸೂಚಿಸಿದ್ದಾರೆ.
ಶಾಲಾ ಕಾಲೇಜುಗಳ ಸಮೀಪ ಗಸ್ತು, ಭದ್ರತೆ ಹೆಚ್ಚಿಸಬೇಕು. ಡ್ರಗ್ಸ್ ಉಂಟು ಮಾಡುವ ಅಪಾಯದ ಕುರಿತು ಜಾಗೃತಿ ಮೂಡಿಸಬೇಕು. ಕ್ಲಬ್ ಗಳು, ಜೂಜು, ಮಟ್ಕಾ ಸೇರಿದಂತೆ ಎಲ್ಲ ಸಂಘಟಿತ ಅಪರಾಧಗಳನ್ನು ತಕ್ಷಣವೇ ನಿಲ್ಲಿಸಬೇಕು. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶಿಸಿದ್ದಾರೆ.
ದ್ವೇಷ ಭಾಷಣ ಹಾಗೂ ಪ್ರಚೋದನಕಾರಿ ಘೋಷಣೆ ಕೂಗುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಸುದ್ಧಿಗಳ ವಿರುದ್ಧ ಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅಗತ್ಯವಿದ್ದರೆ ಸ್ವಯಂ ಪ್ರೇರಿತ ದೂರು ದಾಖಲಿಸಬೇಕು. ಜಿಲ್ಲಾ ಹಾಗೂ ನಗರಮಟ್ಟದ ಪೊಲೀಸ್ ಠಾಣೆಗಳಲ್ಲಿ ನಿಯಮಿತವಾಗಿ ಶಾಂತಿ ಸಭೆ ಹಾಗೂ ಜನಸ್ಪಂದನಾ ಸಭೆ ಆಯೋಜಿಸಬೇಕು. ಎಲ್ಲ ಸಮುದಾಯದ ಜತೆಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಬೇಕು ಎಂದು ಡಿಜಿಪಿ ಸೂಚನೆ ನೀಡಿದ್ದಾರೆ.