ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯದ ಈ ಚಕ್ರವು ನಮ್ಮ ರಾಜ್ಯದ ಮೂಲಸೌಕರ್ಯವನ್ನು ಹಾಳುಮಾಡಿದೆ.

ರಾಜ್ಯ

ಶಿರೂರು ಭೂಕುಸಿತ: ಹೊಣೆಗಾರಿಕೆ ಮತ್ತು ಕ್ರಮಕ್ಕಾಗಿ ಹೃದಯಪೂರ್ವಕ ಮನವಿ

✍️. ಇಸ್ಮಾಯಿಲ್. ಎಸ್, ವಕೀಲರು

ಕಳೆದ ಮಂಗಳವಾರ ಬೆಳಗ್ಗೆ ಅಂಕೋಲಾ ಬಳಿಯ ಪ್ರಶಾಂತವಾದ ಶಿರೂರು ಗ್ರಾಮವು ಹತಾಶೆ ಹಾಗೂ ಕಣ್ಣೀರಿನ ಆಗರವಾಗಿ ಮಾರ್ಪಟ್ಟಿತ್ತು. ಮಾನವ ನಿರ್ಮಿತ ಭೂಕುಸಿತವು ಕನಿಷ್ಠ ಹತ್ತು ಜನರನ್ನು ಮತ್ತು ಹಲವಾರು ವಾಹನಗಳನ್ನು ನೆಲ-ಜಲ ಸಮಾಧಿ ಮಾಡಿತು, ಇಡೀ ಊರಿಗೆ ಊರೇ ಛಿದ್ರಗೊಂದು, ಜನ ಜಾನುವಾರುಗಳನ್ನು ಕಣ್ಣೀರಿನ ಕಡಲಲ್ಲಿ ಮುಳುಗಿಸಿದೆ. ಭೂ ಕುಸಿತಕ್ಕೆ ಬಲಿಯಾದವರಲ್ಲಿ, ಐವರು ಒಂದೇ ಕುಟುಂಬದವರು NH 66 ರ ಪಕ್ಕದಲ್ಲಿ ಹೊಟ್ಟೆಹೊರೆಯುವುದಕ್ಕಾಗಿ ಸಣ್ಣ ಹೋಟೆಲ್ ಹೊಂದಿದ್ದ ಲಕ್ಷ್ಮಣ ನಾಯ್ಕ ಹಾಗೂ ಆತನ ಇಡೀ ಕುಟುಂಬದೊಂದಿಗೆ, ಆ ಬಡಪಾಯಿಗೆ ಜೀವನ ನಿರ್ವಹಣೆಗಾಗಿ ವ್ಯವಹಾರ ಮಾಡಲು ಬಂದಿದ್ದ ಗಿರಾಕಿಗಳ ಮೇಲೆ ಏಕಾಏಕಿ ಕುಸಿದು ಬಿದ್ದ ಗುಡ್ಡ ಕುಸಿದು, ಅವರೆಲ್ಲರ ಜೀವನೋಪಾಯವನ್ನು ಮಾತ್ರವಲ್ಲದೆ ಅವರ ಜೀವನವನ್ನು ಹೊಸಕಿಹಾಕಿತು.

ಈ ಭಯಾನಕ ಹಾಗೂ ವಿನಾಶಕಾರಿ ಘಟನೆಯು ಪ್ರಕೃತಿಯ ಅನಿರೀಕ್ಷಿತತೆಯನ್ನು ಮಾತ್ರವಲ್ಲದೆ ನಮ್ಮ ಮೂಲಸೌಕರ್ಯ ಮತ್ತು ಆಡಳಿತದಲ್ಲಿನ ವೈಫಲ್ಯಗಳನ್ನೂ ಎತ್ತಿ ತೋರಿಸುತ್ತದೆ. ಸ್ಥಳೀಯರು ಐಆರ್‌ಬಿ ರಸ್ತೆ ನಿರ್ಮಾಣ ಕಂಪನಿಯತ್ತ ಬೆರಳು ತೋರಿಸಿದ್ದು, ಅವೈಜ್ಞಾನಿಕ ರಸ್ತೆ ನಿರ್ಮಾಣ ಈ ಅನಾಹುತಕ್ಕೆ ಕಾರಣವಾಗಿರಬಹುದು ಎಂದು ಆರೋಪಿಸಿದ್ದಾರೆ. ಈ ಕುಸಿತವು ಕ್ಷಣಾರ್ಧದಲ್ಲಿ ಸಂಭವಿಸಿತು, ಕಾರು, ಬೃಹತ್ ಟ್ಯಾಂಕರ್, ಮರದ ದಿಮ್ಮಿಗಳನ್ನು ತುಂಬಿದ್ದ ಲಾರಿ ಹಾಗೂ ನೋಡುಗರನ್ನು ಮಣ್ಣು ಮತ್ತು ಅವಶೇಷಗಳ ಮಾರಣಾಂತಿಕ ಪ್ರವಾಹದಲ್ಲಿ ಮುಳುಗಿಸಿತು!

ರಕ್ಷಣಾ ಕಾರ್ಯಾಚರಣೆಗಳು ಪ್ರಾರಂಭವಾಗುತ್ತಿದ್ದಂತೆ, ಭರವಸೆಯು ದುಃಖದೊಂದಿಗೆ ಬೆರೆತುಹೋಯಿತು. ಕಾಣೆಯಾಗಿದ್ದವರ ಪೈಕಿ ಏಳು ನಿರ್ಜೀವ ದೇಹವನ್ನು ಹುಡುಕಿ ತೆಗೆಯಲಾಯಿತು. ಇನ್ನೂ ಮೂರು ಜೀವಗಳು ಎಲ್ಲಿವೆ, ಅವರು ಬದುಕಿದ್ದಾರೆಯೇ, ಬದುಕು ಕಳೆದುಕೊಂಡಿದ್ದಾರೆ, ಅವರಲ್ಲದೆ ಬೇರೆ ಯಾರಾದರೂ ಕಣ್ಮರೆಯಾಗಿದ್ದಾರೆಯೇ ಇತ್ಯಾದಿ ವಿವರಗಳು ಇನ್ನಷ್ಟೇ ಹೊರಕ್ಕೆ ಬರಬೇಕಾಗಿದೆ. ಅವರ ದುರಾದೃಷ್ಟವು ಅವರ ಕುಟುಂಬ ಸದಸ್ಯರನ್ನು ದುಃಖದ ಕಡಲಲ್ಲಿ ಮುಳುಗಿಸಿವೆ. ರಕ್ಷಣಾ ಕಾರ್ಯ ಆರಂಭಿಸುವಲ್ಲಿ ವಿಳಂಬವಾಗುತ್ತಿರುವುದು ವ್ಯಾಪಕ ಖಂಡನೆಗೆ ಕಾರಣವಾಗಿದೆ. ಸತ್ವಪೂರ್ಣ ಹಾಗೂ ಅರ್ಥಪೂರ್ಣ ರಕ್ಷಣಾ ಕಾರ್ಯ ಆರಂಭಿಸುವಲ್ಲಿ ಸುಮಾರು ನಾಲ್ಕೈದು ದಿನಗಳೇ ಕಳೆದಿದೆ, ಸ್ಥಳೀಯ ಅಧಿಕಾರಿಗಳಿಂದಲ್ಲ, ಆದರೆ ನೆರೆಯ ಕೇರಳದ ಒತ್ತಡದಿಂದ ರಕ್ಷಣಾ ಕಾರ್ಯಾಚರಣೆ ವೇಗವನ್ನು ಪಡೆದುಕೊಂಡಿದೆ. ನಮ್ಮ ಸರಕಾರ ಹಾಗೂ ಆಳುವ ವರ್ಗವು ಸಾಮಾನ್ಯ ಜನರ ಜೀವಕ್ಕೆ ಕೊಡುವ ಬೆಲೆ ಇಷ್ಟೇನಾ ಎನ್ನುವಷ್ಟರ ಮಟ್ಟಿಗೆ ನಮ್ಮ ಸರಕಾರ ನಡೆದುಕೊಂಡಿದೆ. ಘಟನೆ ಸ್ಥಳಕ್ಕೆ ಸುಮಾರು ಆರು ದಿನಗಳ ಬಳಿಕ ಬಂದ ಮುಖ್ಯಮಂತ್ರಿ, ನೊಂದವರಿಗೆ ಸಾಂತ್ವನ ಹೇಳುವ ಬದಲು, ಸ್ಥಳೀಯ ನಾಯಕರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆದು ವಾಪಸ್ಸು ಹೋಗಿದ್ದಾರೆ. ಹೋದದ್ದು ಮಾತ್ರವಲ್ಲದೆ, ಹೋಗುವಾಗ ರಾಜಕೀಯ ಮಾಡುವದನ್ನು ಮರೆಯಯದೇ ಈ ಹಿಂದಿನ ಆಡಳಿತ ಪಕ್ಷದತ್ತ ಬೆಟ್ಟು ಮಾಡಲು ಮರೆಯಲಿಲ್ಲ ಎನ್ನುವುದು ವಿಪರ್ಯಾಸವೇ ಸರಿ.

ರಾಜಕೀಯ ನಾಯಕರು ಮೂಲಸೌಕರ್ಯ ಯೋಜನೆಗಳ ದುರುಪಯೋಗ ಮತ್ತು ಅತಿರೇಕದ ಭ್ರಷ್ಟಾಚಾರದ ಬಗ್ಗೆ ಪರಸ್ಪರ ಆರೋಪಗಳನ್ನು ಮಾಡುವ ಮೂಲಕ ಆಪಾದನೆಯ ಆಟದಲ್ಲಿ ತೊಡಗಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ, ಅವರು ಮೂಲಸೌಕರ್ಯ ಅಭಿವೃದ್ಧಿಯಲ್ಲಿ 40 ಪ್ರತಿಶತ ಕಮಿಷನ್ ಆರೋಪಗಳನ್ನು ಎದುರಿಸಿದರು, ವಿಮರ್ಶಕರು ಈಗ ಹೇಳಿಕೊಳ್ಳುವ ಪ್ರಕಾರ ಸರಕಾರ ಬದಲಾಗಿ ಪ್ರಸ್ತುತ ಕಾಂಗ್ರೆಸ್ ಆಡಳಿತದಲ್ಲಿಯು ಅದೇ 40 ಪ್ರತಿಷದ ಕಮಿಷನ್ ದಂಧೆ ಮುಂದುವರೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯದ ಈ ಚಕ್ರವು ನಮ್ಮ ರಾಜ್ಯದ ಮೂಲಸೌಕರ್ಯವನ್ನು ಹಾಳುಮಾಡಿದೆ.

ಶಿರಾಡಿ , ಚಾರ್ಮಾಡಿ, ಮಡಿಕೇರಿ ಮುಂತಾದ ಪ್ರಮುಖ ಮಾರ್ಗಗಳು ಭೂಕುಸಿತದಿಂದ ರಾಜ್ಯದ ಅತ್ಯಂತ ಪ್ರಮುಖ ಬಂದರು ನಗರಕ್ಕೆ ಸೂಕ್ತ ಸಂಪರ್ಕ ರಸ್ತೆಯೇ ಇಲ್ಲದಂತಾಗಿದೆ. ಶಿರಾಡಿ ರಸ್ತೆ, ಅತ್ಯಂತ ಪ್ರಮುಖ ಕೊಂಡಿಯಾಗಿದ್ದರೂ, ಕಳೆದ ಒಂದು ದಶಕದಿಂದ “ಚತುಷ್ಪತ ರಸ್ತೆ ನಿರ್ಮಾಣ” ಎಂದು ಕರೆಯಲ್ಪಡುವ ಪ್ರಹಸನಕ್ಕೆ ತುತ್ತಾಗಿ ನರಳುತ್ತಿದೆ. ಪ್ರತಿ ಮಳೆಗಾಲದಲ್ಲಿ ಪರಿಸ್ಥಿತಿಯೂ ಕೈ ಮೀರಿ ಹೋಗುತ್ತಿದ್ದರೂ, ಸೂಕ್ತ ಕ್ರಮವಿಲ್ಲದೆ ತರಾತುರಿಯಲ್ಲಿ ಮತ್ತು ಕಳಪೆಯಾಗಿ ನಿರ್ಮಿಸಿದ ಡಾಂಬರ್ ರಸ್ತೆಗಳು, ಮಳೆಯೊಂದಿಗೆ ಕೊಚ್ಚಿಹೋಗಿ, ಬಳಸಿದ ಗುಣಮಟ್ಟವಿಲ್ಲದ ವಸ್ತುಗಳ ಚಿತ್ರಣವನ್ನು ಸಾರ್ವಜನಿಕರ ಮುಂದೆ ಜಗಜ್ಜಾಹೀರುಗೊಳಿಸುತ್ತಿದೆ. ಇದು ಈ ಒಂದು ಪ್ರದೇಶದ ಸಮಸ್ಯೆಯಾಗಿರದೆ ಇಡೀ ರಾಜ್ಯದ ಸಮಸ್ಯೆಗಾಗಿದೆ.

ನಮ್ಮ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ಹಾಗೂ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದರಿಂದಾಗಿ ನಾಗರಿಕರು ನರಳುತ್ತಿದ್ದಾರೆ. ರಾಜಕೀಯ ನಾಯಕರು ತಾವು ಸೇವೆ ಸಲ್ಲಿಸಲು ಉದ್ದೇಶಿಸಿರುವ ಜನರ ಜೀವನ ಮತ್ತು ಯೋಗಕ್ಷೇಮಕ್ಕಿಂತ ತಮ್ಮ ಅಧಿಕಾರದ ಆಟಗಳಿಗೆ ಆದ್ಯತೆ ನೀಡುವುದು ಅಮಾನವೀಯ ಮತ್ತು ಅವಿವೇಕದ ಸಂಗತಿಯಾಗಿದೆ. ನಮ್ಮ ರಾಜ್ಯದ ರಾಜಕಾರಣಿಗಳು ಸಮಾಜವನ್ನು ಧಾರ್ಮಿಕ ಮತ್ತು ಜಾತಿಗಳ ಮೂಲಕ ವಿಭಜಿಸಲು, ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳಲು ಮತ್ತು ಮುಂದಿನ ಚುನಾವಣೆಗೆ ಮತಗಳನ್ನು ಪಡೆಯಲು ಸಾಮಾಜಿಕ ಕಾರ್ಯಗಳಾದ ಮಾಡುವೆ, ಸಾವು, ಮುಂಜಿ, ಉದ್ಘಾಟನೆ ಸಮಾರಂಭಗಳಿಗೆ ಹಾಜರಾಗಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆಯೇ ಹೊರತು ಜನರ ಜೀವನ ಸ್ಥಿತಿಗತಿಗಳನ್ನು ಸುಧಾರಿಸಲು ಯಾವುದೇ ಪ್ರಯತ್ನ ಮಾಡದೆ ಇರುವುದು ಬಹುದೊಡ್ಡ ದುರಂತವೇ ಸರಿ.

ಈ ನಾಯಕರನ್ನು ಹೊಣೆಗಾರರನ್ನಾಗಿಸಲು ಸಾಮಾನ್ಯ ಜನತೆಗೆ ಇದು ಸಕಾಲ. ನಾವು ಅಧಿಕಾರದಲ್ಲಿರುವವರಿಂದ ಪಾರದರ್ಶಕತೆ, ಸಮಗ್ರತೆ, ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ನೈಜ ಕಾಳಜಿಯುಕ್ತ ಆಡಳಿತವನ್ನು ಪಡೆಯುವಂತಾಗಬೇಕು. ಶಿರೂರಿನಲ್ಲಿ ಬಲಿಯಾದ ಜೀವಗಳು ವ್ಯರ್ಥವಾಗಬಾರದು. ಇಂತಹ ದುರಂತಗಳು ಸಂಭವಿಸಲು ಅನುವು ಮಾಡಿಕೊಡುವ ವ್ಯವಸ್ಥಿತ ಭ್ರಷ್ಟಾಚಾರವನ್ನು ನಾವು ಸವಾಲು ಮಾಡಬೇಕು ಮತ್ತು ಮಾನವ ಜೀವನ ಮತ್ತು ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡುವ ಸುಧಾರಣೆಗಳಿಗೆ ಒತ್ತಾಯಿಸಬೇಕು.

ಈ ಹೃದಯವಿದ್ರಾವಕ ಘಟನೆಯು ಜೀವನದ ದುರ್ಬಲತೆಯನ್ನು ಮತ್ತು ಜವಾಬ್ದಾರಿಯುತ ಆಡಳಿತದ ತುರ್ತು ಅಗತ್ಯವನ್ನು ನೆನಪಿಸುತ್ತದೆ. ಅಂತಹ ತಡೆಗಟ್ಟಬಹುದಾದ ಅನಾಹುತಗಳು ಇನ್ನು ಮುಂದೆ ಸಂಭವಿಸದ ಭವಿಷ್ಯಕ್ಕಾಗಿ ಶ್ರಮಿಸುವ ಮೂಲಕ ಕಳೆದುಹೋದವರ ನೆನಪುಗಳನ್ನು ನಾವು ಗೌರವಿಸೋಣ. ಮಾನವ ಜೀವನ, ಮನುಷ್ಯತ್ವಯುಕ್ತ ಸಮಾಜ ಹಾಗೂ ಸರಕಾರಗಳು ಬಂದಲ್ಲಿ, ಅದೇ ನಾವು ಕಳೆದು ಹೋದ ಜೀವಗಳಿಗೆ ಕೊಡುವ ನಿಜವಾದ ಶ್ರದ್ಧಾಂಜಲಿಯಾಗುತ್ತದೆ.