ಡ್ರಗ್ಸ್, ನಶೆಯೇರಿಸುವ ಮಾತ್ರೆಗಳು, ಕಾಂಡೋಮ್ ಪತ್ತೆ
ಬಂಟ್ವಾಳ: ವಿಟ್ಲ ಠಾಣಾ ವ್ಯಾಪ್ತಿಯ ಕಳೆಂಜಿಮಲೆ ರಕ್ಷಿತಾರಣ್ಯ ಅನೈತಿಕ ಚಟುವಟಿಕೆ, ಅಕ್ರಮ ದಂಧೆಗಳ ಅಡ್ಡೆಯಾಗುತ್ತಿದೆ. ಕೊಳ್ನಾಡು ಗ್ರಾಮದ ಸಾಲೆತ್ತೂರು-ಕುಡ್ತಮುಗೇರು ಮೂಲಕ ಕನ್ಯಾನ ತಲುಪುವ ಕಾಂಕ್ರೀಟ್ ರಸ್ತೆ ಕಳೆಂಜಿಮಲೆ ರಕ್ಷಿತಾರಣ್ಯ ಮೂಲಕ ಹಾದು ಹೋಗುತ್ತಿದೆ. ಆದರೆ ದಿನವಿಡೀ ರಕ್ಷಿತಾರಣ್ಯ ಪ್ರದೇಶದಲ್ಲಿ ರಾಜಾರೋಷವಾಗಿ ಮದ್ಯ, ಡ್ರಗ್ಸ್ ಸೇವಿಸುವ ಪುಂಡರು ಅನೈತಿಕ ಚಟುವಟಿಕೆ ನಡೆಸುತ್ತಾ ಜನ ಸಾಮಾನ್ಯರ ಪಾಲಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ.
ರಕ್ಷಿತಾರಣ್ಯ ತಪ್ಪಲು ಪ್ರದೇಶದ ಕುಳಾಲು, ಕುದ್ರಿಯ, ಮಂಕುಡೆ, ಕೋಜಿಗುರಿ ಮತ್ತು ಕುಂಟ್ರಕಳ ಪರಿಸರದ ನೂರಾರು ವಿದ್ಯಾರ್ಥಿಗಳು ಕನ್ಯಾನ, ವಿಟ್ಲ, ಮುಡಿಪು ಶೈಕ್ಷಣಿಕ ಸಂಸ್ಥೆಗಳಿಗೆ ಹೋಗುತ್ತಿದ್ದಾರೆ. ಇದಲ್ಲದೇ ಹಲವಾರು ವಾಹನಗಳೂ ಇದೇ ರಸ್ತೆಯಲ್ಲಿ ಸಂಚರಿಸುತ್ತಿವೆ. ಅದ್ಯಾವುದರ ಪರಿವೆಯೇ ಇಲ್ಲದೇ ನಶೆಯಲ್ಲಿ ತೇಲಾಡುವ ಪುಂಡರು ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಪರಿಸರದ ಜನರ ತೀವ್ರ ಮುಜುಗರಕ್ಕೆ ಕಾರಣವಾಗಿದೆ.
ಅಪ್ರಾಪ್ತ ಬಾಲಕಿಯನ್ನು ರಕ್ಷಿತಾರಣ್ಯಕ್ಕೆ ಬೈಕ್ ಸವಾರನೊಬ್ಬ ಕರೆತಂದಿದ್ದಾನೆಂಬ ಸುದ್ದಿ ತಿಳಿದು ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿ ಹುಡುಕಾಡಿದ್ದಾರೆ. ಜನ ಜಾಲಾಡುತ್ತಿದ್ದ ನಡುವೆಯೇ ಬೈಕ್, ಬಟ್ಟೆ ಬರೆಗಳನ್ನು ಅಲ್ಲೇ ಬಿಟ್ಟು ಅರೆನಗ್ನರಾಗಿದ್ದ ಯುವಕ-ಯುವತಿ ಪರಾರಿಯಾಗಿದ್ದಾರೆ. ಸಾರ್ವಜನಿಕರ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಿತಾರಣ್ಯದಲ್ಲಿ ಅನಾಥ ಸ್ಥಿತಿಯಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ನಶೆಯೇರಿಸುವ ಮಾತ್ರೆಗಳು, ಕಾಂಡೋಮುಗಳು ಮತ್ತು ಚಪ್ಪಲಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇದೀಗ ಪೊಲೀಸರು ಯುವತಿ ಮತ್ತು ಯುವಕನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು ಇನ್ನಾದರೂ ರಕ್ಷಿತಾರಣ್ಯ ಪರಿಸರ ಪುಂಡರಿಂದ ಮುಕ್ತವಾಗಲಿ ಎಂದು ಜನ ಒತ್ತಾಯಿಸಿದ್ದಾರೆ.