“ಆ ಟೀ ಶರ್ಟ್ ನವನನ್ನು ಹಿಡಿಯಿರಿ. ಅವನೇ ದಾಳಿಯ ರೂವಾರಿಯಂತೆ ಕಾಣುತ್ತಿದ್ದಾನೆ” ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನುಡಿದಿದ್ದು ಈಗಲೂ ಅರಣ್ಯ ರೋದನದಂತೆ ಪ್ರತಿಧ್ವನಿಸುತ್ತಿದೆ.
✍️. ನವೀನ್ ಸೂರಿಂಜೆ, ಹಿರಿಯ ಪತ್ರಕರ್ತರು
“ಆ ಬ್ಲೂ ಶರ್ಟ್ ಧರಿಸಿದವನು ಯಾರು ? ಅವನನ್ನು ಬಿಡಬೇಡಿ” ಹೀಗೆಂದು 01 ಆಗಸ್ಟ್ 2012ರಂದು ಹೇಳಿದವರು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ! 2012ರ ಜುಲೈ 27ರಂದು ಹಿಂದೂ ಜಾಗರಣಾ ವೇದಿಕೆ ನಡೆಸಿದ ಹೋಂ ಸ್ಟೇ ದಾಳಿ ಭೀಕರತೆಯನ್ನು ನಾನು ಮತ್ತು ಕ್ಯಾಮರಾಮೆನ್ ಚಿತ್ರೀಕರಿಸಿದ್ದ ವಿಡಿಯೋವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯ ವೇಳೆ ವೀಕ್ಷಿಸಿದ್ದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆರೋಪಿಗಳನ್ನು ಗುರುತಿಸಿದ್ದರು.
‘ಈ ದಾಳಿಯಿಂದ ನಾವೆಲ್ಲರೂ ತಲೆತಗ್ಗಿಸುವಂತಾಗಿದೆ. ಘಟನೆ ವೇಳೆ ಅಲ್ಲಿದ್ದ ಬ್ಲೂ ಶರ್ಟ್ ಧರಿಸಿದ್ದವನನ್ನು ಪತ್ತೆ ಹಚ್ಚಿ, ಬ್ಲೂಶರ್ಟ್ ಹಾಕಿದ್ದವ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಆತನ ಬಗ್ಗೆ ಯಾವ ರೀತಿ ಕ್ರಮ ತೆಗೆದುಕೊಂಡಿದ್ದೀರಿ ಎನ್ನುವುದನ್ನು ತಿಳಿಸಬೇಕು. ದಾಳಿಯ ಬಗ್ಗೆ ಸರಿಯಾದ ತನಿಖೆ ನಡೆಸಿ ಏಳು ದಿನಗಳ ಒಳಗೆ ವರದಿ ಸಲ್ಲಿಸಿ’ ಎಂದು ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ತರಾಟೆಗೆ ತೆಗೆದುಕೊಂಡಿದ್ದರು.
ವಿಪರ್ಯಾಸ ಎಂದರೆ, ಅಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೇ ಗುರುತಿಸಿದ್ದ ಆರೋಪಿಗಳನ್ನು ಜಿಲ್ಲಾ ನ್ಯಾಯಾಲಯ 12 ವರ್ಷಗಳ ಬಳಿಕ ಗುರುತಿಸಲು ವಿಫಲವಾಯಿತು ! ಹೋಂ ಸ್ಟೇ ಮೇಲೆ ದಾಳಿ ಮಾಡಿ ಅಮಾಯಕ ಹುಡುಗ – ಹುಡುಗಿಯರನ್ನು ಹಿಂಸಿಸಿದ ಹಿಂದೂ ಜಾಗರಣಾ ವೇದಿಕೆಯ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
2012ರ ಜುಲೈ 28 ಸಂಜೆ 7:15 ಕ್ಕೆ ಮಂಗಳೂರಿನ ಪಡೀಲ್ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇಯಲ್ಲಿ ನಡೆದ ಘಟನೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ಸುದ್ದಿ ಮೂಲವೊಂದು ಕೊಟ್ಟ ಮಾಹಿತಿಯಂತೆ ನಾನು ಮತ್ತು ಕ್ಯಾಮರಾಮೆನ್ ದಾಳಿಕೋರ ಹಿಂದೂ ಜಾಗರಣಾ ವೇದಿಕೆಯ ಸದಸ್ಯರಿಗಿಂತಲೂ ಮೊದಲೇ ಹೋಂ ಸ್ಟೇ ಎದುರು ಹಾಜರಾಗಿದ್ದೆವು. ದಾಳಿಕೋರರು ಯಾವ ಸಂಘಟನೆಯವರು ಯಾರು ? ಯಾಕಾಗಿ ಬರುತ್ತಿದ್ದಾರೆ ಎಂಬ ಮಾಹಿತಿ ಆ ಸಂದರ್ಭದಲ್ಲಿ ಇರಲಿಲ್ಲ.
ಮಂಗಳೂರು-ಬೆಂಗಳೂರು ಹೆದ್ದಾರಿ ಪಡೀಲ್ ರಸ್ತೆಯಿಂದ ಅಂದಾಜು ಅರ್ಧ ಕಿ.ಮೀ ರಸ್ತೆ ದಾರಿಯಲ್ಲಿ ಈ ಹೋಂ ಸ್ಟೇ ಇದೆ. ಹೋಂ ಸ್ಟೇ ಸುತ್ತಲೂ ದೊಡ್ಡದಾದ ಕಂಪೌಂಡ್ ಇದೆ. ಒಂದೇ ಒಂದು ಗೇಟ್ ಇದೆ. ಗೇಟ್ ನಿಂದ 60 ಮೀಟರ್ ದೂರದಲ್ಲಿ ಹೋಂ ಸ್ಟೇ ಬಂಗಲೆ ಇದೆ. ನಾನು ಗೇಟ್ ಹತ್ತಿರ ನಿಂತು ಒಮ್ಮೆ ಇಡೀ ಬಂಗಲೆಯತ್ತಾ ಕಣ್ಣಾಡಿಸಿದೆ. ಅಲ್ಲಿ ದಾಳಿ ಮಾಡಲು ಕಾರಣವಾಗುವಂತಹ ಯಾವುದೇ ಆ್ಯಕ್ಟಿವಿಟೀಸ್ ನನಗೆ ಗೋಚರಿಸಲಿಲ್ಲ. ಒಬ್ಬಳು ಹುಡುಗಿ ಹೊರಗೆ ಚೇರ್ ಲ್ಲಿ ಕುಳಿತಿದ್ದಳು. ಇನ್ನಿಬ್ಬರು ಹುಡುಗರು ಬಂಗಲೆಯ ಮತ್ತೊಂದು ಮೂಲೆಯಲ್ಲಿ ನಿಂತುಕೊಂಡು ಮೊಬೈಲ್ ನಲ್ಲಿ ಆಟವಾಡುತ್ತಿದ್ದರು. ಅವರು ಯಾವುದೇ ರೀತಿಯಲ್ಲೂ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿರಲಿಲ್ಲ. ಆದುದರಿಂದ ದಾಳಿಕೋರರು ಬಯಸುವ ಸನ್ನಿವೇಶ ಅಲ್ಲಿರಲಿಲ್ಲ. ಆದುದರಿಂದ ನನಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಅನ್ನಿಸಲಿಲ್ಲ. ನನ್ನ ಮಾಹಿತಿಯಿಂದ ಹೋಂ ಸ್ಟೇಯಲ್ಲಿ ಆರಾಮವಾಗಿರುವ ಹುಡುಗ ಹುಡುಗಿಯರಿಗೆ ತೊಂದರೆಯಾಗುತ್ತದೆ ಎಂಬ ಆತಂಕದಿಂದಲೇ ಮಾಹಿತಿ ನೀಡಲಿಲ್ಲ. ನಾನು ಈ ರೀತಿ ಯೋಚಿಸುತ್ತಿರುವಾಗಲೇ ಸುಮಾರು ಮೂವತ್ತಕ್ಕೂ ಅಧಿಕ ಜನರಿದ್ದ ತಂಡವೊಂದು ಹೋಂ ಸ್ಟೇ ಗೇಟಿನತ್ತಾ ಬರುತ್ತಿತ್ತು. ನಾನು ತಕ್ಷಣ ಕುತೂಹಲದಿಂದಲೇ ಕೇಳಿದೆ. “ಏನು ವಿಷಯ? ಏನಾಗ್ತಾ ಇದೆ ಇಲ್ಲಿ ?” ಎಂದು ತುಳುವಿನಲ್ಲಿ ಪ್ರಶ್ನಿಸಿದೆ. ತಕ್ಷಣ ಯುವಕನೊಬ್ಬ “ಬ್ಯಾರಿಗಳು ನಮ್ಮ ಹಿಂದೂ ಹುಡುಗಿಯರನ್ನು ಇಲ್ಲಿ ಕರೆದುಕೊಂಡು ಬಂದಿದ್ದಾರೆ. ಅವರನ್ನು ಬಿಡಬಾರದು” ಎಂದ. ಅಷ್ಟರಲ್ಲಿ ಗುಂಪಿನಲ್ಲಿದ್ದ ಇನ್ನಿತರ ಯುವಕರು ಹೊರಗೆ ಕುಳಿತಿದ್ದ ಹುಡುಗಿಯತ್ತಾ ಕೈ ತೋರಿಸಿ “ಅಲ್ಲಿ ಅಲ್ಲಿ ಇದ್ದಾಳೆ ಹುಡುಗಿ, ಅಗೋ ಹುಡುಗರು ಅಲ್ಲಿದ್ದಾರೆ” ಎಂದು ಯುವಕ-ಯುವತಿಯರತ್ತಾ ಓಡಿಕೊಂಡು ದಾಳಿಗೆ ಸಿದ್ಧರಾದರು. ತಕ್ಷಣ ದಾಳಿ ಅರಿವಾದ ಯುವತಿ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಬಂಗಲೆಯ ಒಳ ಹೋದಳು. ಮತ್ತು ಬಾಗಿಲು ಹಾಕಲು ಯತ್ನಿಸಿದಳು. ಆಗ ಸುಮಾರು 30 ರಷ್ಟಿದ್ದ ದಾಳಿಕೋರರು ಬಾಗಿಲನ್ನು ಬಲವಾಗಿ ದೂಡಿ ಬಾಗಿಲು ತೆರೆದರು.
ಈಗ ನನ್ನ ಪ್ರಜ್ಞೆ ನಿಜವಾಗಿಯೂ ಜಾಗೃತವಾಗಿತ್ತು. ತಕ್ಷಣ ನನ್ನ ಕಚೇರಿ ಮೊಬೈಲ್ 99724 ನಿಂದ ಮಂಗಳೂರು ಗ್ರಾಮಾಂತರ ಪೊಲೀಸ್ ನಿರೀಕ್ಷಕರ 9480800 ಎಂಬ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದೆ. ಆಗ ಸುಮಾರು 7:15ರ ಸಂಜೆ ಸಮಯ. ಇನ್ ಸ್ಪೆಕ್ಟರ್ ನನ್ನ ಕರೆ ಸ್ವೀಕರಿಸಲೇ ಇಲ್ಲ. ಒಂದು ಕಡೆಯಿಂದ ದಾಳಿ ಪ್ರಾರಂಭವಾಗಿದೆಯಷ್ಟೆ. ಇನ್ನೇನು ಆಗುತ್ತೋ ಎಂಬ ಆತಂಕದ ನಡುವೆಯೇ ಕಕ್ಕಾಬಿಕ್ಕಿಯಾದ ಹುಡುಗಿಯರು ಎಲ್ಲೆಲ್ಲೋ ಓಡಲು ಶುರುವಿಟ್ಟುಕೊಂಡಿದ್ದರು. ಪೊಲೀಸರಿಗೆ ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಬೇರೆ ದಾರಿ ಕಾಣದೆ ಟಿವಿ9 ವರದಿಗಾರನಾಗಿರುವ ನನ್ನ ಗೆಳೆಯ ರಾಜೇಶ್ ರಾವ್ ಬಳಿ ಪೊಲೀಸರಿಗೆ ಫೋನ್ ಮಾಡುವಂತೆ ಹೇಳಿದೆ. ರಾಜೇಶ್ ರಾವ್ ಅವರ ಮೊಬೈಲ್ ನಿಂದ ಇನ್ ಸ್ಪೆಕ್ಟರ್ ಗೆ ಕರೆ ಮಾಡಿದರು. ಆಗಲೂ ಇನ್ ಸ್ಪೆಕ್ಟರ್ ಕರೆ ಸ್ವೀಕರಿಸಲೇ ಇಲ್ಲ.
ದಾಳಿಕೋರರಲ್ಲಿ ಶೇ.50ಕ್ಕೂ ಅಧಿಕ ಮಂದಿ ಮದ್ಯಪಾನ ಮಾಡಿದ್ದರು. ನಾನು ಹೇಳಿದರೂ ಕೇಳೋ ಸ್ಥಿತಿಯಲ್ಲಿ ಇರಲಿಲ್ಲ. ಈ ಜಗತ್ತಿನಲ್ಲಿ ಏನೇನೋ ಹಿಂಸೆಗಳು ನಡೆದಿರಬಹುದು. ಆದರೆ ನನ್ನ ಜೀವಮಾನದಲ್ಲಿ ಇಂತಹ ಹಿಂಸೆಯನ್ನು ನೋಡಿರಲಿಲ್ಲ. ನನ್ನ ಕ್ಯಾಮರಾಮೆನ್ ಎಲ್ಲೆಲ್ಲಿ ಹೊಡೆಯುತ್ತಾರೋ ಅಲ್ಲಲ್ಲಿ ಓಡುತ್ತಿದ್ದ. ನಾನು ನೋಡುತ್ತಿದ್ದೆ ಮತ್ತು ಸಾಧ್ಯವಾದಷ್ಟೂ ಕಿರುಚುತ್ತಿದ್ದೆ. “ಏ ಹುಡುಗಿರಿಗೆ ಹೊಡಿಬೇಡ್ರಿ” ಎಂತ ಬೊಬ್ಬೆ ಹೊಡೆಯುತ್ತಿದ್ದೆ. ನನ್ನ ಬೊಬ್ಬೆ ನನ್ನ ಕ್ಯಾಮರಾದಲ್ಲಿ ದಾಖಲಾಗಿದೆಯೇ ವಿನಹ ದಾಳಿಕೋರರ ಹೃದಯಕ್ಕೆ ತಟ್ಟಲೇ ಇಲ್ಲ. ಹಲ್ಲೆಗೆ ಒಳಗಾದ ಯುವಕರು ಗೋಗೆರೆಯುತ್ತಿದ್ದರು. “ಪ್ಲೀಸ್ ಬಿಟ್ಟುಬಿಡಿ. ನಾವು ಬರ್ತ್ ಡೇ ಪಾರ್ಟಿ ನಡೆಸುತ್ತಿದ್ದೇವೆ, ಪ್ಲೀಸ್” ಎಂದು ಕಾಲಿಗೆ ಬೀಳುತ್ತಾರೆ. ಆದರೂ ಕ್ರೂರಿ ದಾಳಿಕೋರರ ಮನಸ್ಸು ಕರಗುವುದಿಲ್ಲ. ಇಷ್ಟೇ ಆಗಿದ್ದರೆ ನಾನು ಮರೆತುಬಿಡುತ್ತಿದ್ದೆ. ಆದರೆ ನನ್ನ ಕಣ್ಣ ಮುಂದೆ ಬಂದಿದ್ದು ಬೀಭತ್ಸ ದೃಶ್ಯಗಳು.
ತಮ್ಮ ಜೊತೆ ಇದ್ದ ನಾಲ್ವರು ಹುಡುಗರಿಗೆ ದಾಳಿಕೋರರು ಬಡಿಯುತ್ತಿರುವ ದೃಶ್ಯ ನೋಡಿ ಶಾಕ್ ಗೆ ಒಳಗಾದ ಹುಡುಗಿಯರು ದಿಕ್ಕಾಪಾಲಾಗಿ ಓಡಲು ಶುರುವಿಟ್ಟುಕೊಂಡರು. ಬಂಗಲೆಯ ತುಂಬಾ ಓಡುತ್ತಿರುವ ಯುವತಿಯರ ಹಿಂದೆ ಒಂದಷ್ಟು ದಾಳಿಕೋರರ ಓಟ ನಡೆಯುತ್ತಿತ್ತು. ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಒಬ್ಬಳು ಹುಡುಗಿ ಒಂದನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾಳೆ. ಅವಳನ್ನು ಹಿಡಿದುಕೊಂಡ ಇಪ್ಪತ್ತೂ ಅಧಿಕ ದಾಳಿಕೋರ ಕಾರ್ಯಕರ್ತರು ಆಕೆಯ ವಸ್ತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಆಕೆಯ ಕೆನ್ನೆಗೆ ಬಿಗಿದು, ಗೋಡೆಗೆ ನೂಕಿದ್ದಾರೆ. ಇನ್ನೊಬ್ಬ ಯುವತಿಯನ್ನು ಬೆಡ್ ರೂಂಗೆ ಬಲವಂತವಾಗಿ ತಳ್ಳಿ ಕಪಾಳಕ್ಕೆ ಬಿಗಿದರು. (ಆ ದೃಶ್ಯಾವಳಿ ಗಮನಿಸಿಯೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಆ ನೀಲಿ ಅಂಗಿಯವನನ್ನು ಬಿಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದು) ಯುವತಿಯೊಬ್ಬಳ ಕುತ್ತಿಗೆ ಕೈ ಹಾಕಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನೊಬ್ಬ ಆಕೆಯ ಚಿನ್ನದ ಸರವನ್ನು ದರೋಡೆ ಮಾಡಿದ. ಮತ್ತೊಬ್ಬ ಹುಡುಗಿಯರ ಬ್ಯಾಗ್ ನಲ್ಲಿದ್ದ ಹಣ ಎಗರಿಸಿದ. ಹಿಂದುತ್ವ- ಭಾರತೀಯ ಸಂಸ್ಕೃತಿ ರಕ್ಷಣೆ ಹೆಸರಿನಲ್ಲಿ ದರೋಡೆ ನಡೆಯಿತು. ಅಷ್ಟರಲ್ಲಿ ಪಿಂಕ್ ಡ್ರೆಸ್ ತೊಟ್ಟುಕೊಂಡಿದ್ದ ಹುಡುಗಿಯೊಬ್ಬಳು ಓಡಲು ಶುರುವಿಟ್ಟುಕೊಂಡಳು. ಆಕೆಯನ್ನು ಹಿಡಿದ ಗೂಂಡಾ ದಾಳಿಕೋರರು ಅಕ್ಷರಶಃ ಆಕೆಯನ್ನು ಬಟ್ಟೆಯನ್ನು ಕಿತ್ತು ಬಿಸಾಡಿದ್ದಾರೆ. ಮೈತುಂಬಾ ವಸ್ತ್ರ ತೊಟ್ಟಿದ್ದ ಹುಡುಗಿಯರನ್ನು ತುಂಡು ಬಟ್ಟೆ ತೊಟ್ಟು ಭಾರತೀಯ ಸಂಸ್ಕೃತಿಗೆ ವಿರುದ್ದವಾಗಿದ್ದರು ಎಂದು ತೋರಿಸುವ ದುರುದ್ದೇಶ ದಾಳಿಕೋರರದ್ದಾಗಿತ್ತು. ಒಂದು ತುಂಡು ವಸ್ತ್ರ ಹೊರತುಪಡಿಸಿ ವಿವಸ್ತ್ರ ಮಾಡಿದ ನಂತರ ಆಕೆಯ ಅಂಗಾಂಗಳ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡಿದ್ದಾರೆ. ಇದು ನನ್ನನ್ನು ಅಕ್ಷರಶ ಅಧೀರನನ್ನಾಗಿಸಿದ ದೃಶ್ಯ. ಈ ರೀತಿಯ ದೃಶ್ಯವನ್ನು ನಾನು ನನ್ನ ಜೀವಮಾನದಲ್ಲಿ ನೋಡಿರಲಿಲ್ಲ. ಇವೆಲ್ಲವೂ ನಮ್ಮ ಕ್ಯಾಮರಾದಲ್ಲಿ ರೆಕಾರ್ಡ್ ಆಗದೇ ಇದ್ದ ಘಟನೆಗಳು. ಕ್ಯಾಮರಾದಲ್ಲಿ ದಾಖಲಾಗಿದ್ದು ಸ್ವಲ್ಪವೇ ಸ್ವಲ್ಪ ಭಾಗ. ಆನಂತರ ಹೋಂ ಸ್ಟೇಯಲ್ಲಿದ್ದ ಎಲ್ಲಾ ಹುಡುಗ ಹುಡುಗಿಯರನ್ನು ಒಂದೇ ಕೋಣೆಯಲ್ಲಿ ಹಾಕಿ ಚಿಲಕ ಹಾಕಿದರು. ಇವೆಲ್ಲವೂ ನಡೆದಿದ್ದು ಮಿಂಚಿನ ವೇಗದಲ್ಲಿ. ಹೆಚ್ಚೆಂದರೆ 15 ನಿಮಿಷದಲ್ಲಿ ಇವೆಲ್ಲವೂ ಮುಗಿದು ಹೋಗಿತ್ತು.
ದಾಳಿಕೋರರ ಕಾರ್ಯಾಚರಣೆ ಒಂದು ಹಂತಕ್ಕೆ ಮುಗಿದ ನಂತರ ಪೊಲೀಸರು ಬಂದರು. ಸುಮಾರು ಅರ್ಧ ಗಂಟೆಗಳಿಗೂ ಹೆಚ್ಚು ಕಾಲ ಪೊಲೀಸರು ದಾಳಿಕೋರರ ಜೊತೆ ಮಾತಕತೆಯಲ್ಲಿ ತಲ್ಲೀನರಾಗಿದ್ದರು. ದಾಳಿಕೋರರನ್ನು ಬಂಧಿಸುವ ಬದಲು ಅವರ ಜೊತೆ ಹರಟೆ ಹೊಡೆಯುತ್ತಿರುವುದು ನನಗೆ ಆಶ್ಚರ್ಯ ಉಂಟು ಮಾಡಿತ್ತು. ಇವೆಲ್ಲಾ ನಡೆಯುತ್ತಿರಬೇಕಾದರೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬ ತಪ್ಪಿಸಿಕೊಳ್ಳಲು ಯತ್ನಿಸಿದ. ತಕ್ಷಣ ಪೊಲೀಸರು ಆ ಯುವಕನನ್ನು ವಶಕ್ಕೆ ತೆಗೆದುಕೊಂಡರು. ಪೊಲೀಸರ ವಶದಲ್ಲಿದ್ದ ಯುವಕನಿಗೆ ದಾಳಿಕೋರರು ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಿದರು. ಪೊಲೀಸರಿಗೆ ದಾಳಿಕೋರರಿಗಿಂತಲೂ ಹೋಂ ಸ್ಟೇಯಲ್ಲಿ ಹುಡುಗ- ಹುಡುಗಿಯೇ ಆರೋಪಿಗಳಾಗಿ ಕಂಡಿದ್ದರು ಎಂಬುದನ್ನು ಇದು ಸೂಚಿಸುತ್ತಿತ್ತು.
ಹಾಗಾಗಿ ನಾನು ಮತ್ತು ಕ್ಯಾಮರಾಮೆನ್ ಕಚೇರಿಗೆ ಬಂದು ಎಲ್ಲಾ ದೃಶ್ಯಾವಳಿಗಳನ್ನು ಎಲ್ಲಾ ಮಾಧ್ಯಮಗಳಿಗೆ ನೀಡಿದೆವು. ಕ್ಷಣಾರ್ಧದಲ್ಲಿ ರಾಷ್ಟ್ರೀಯ ವಾಹಿನಿಗಳು ಸುದ್ದಿ ಪ್ರಕಟಿಸಿದವು. ಹಿಂದುತ್ವ ಸಂಘಟನೆಗಳ ಮುಖಂಡರು ಇದೊಂದು “ರೇವ್ ಪಾರ್ಟಿ” ಎಂದು ಬಿಂಬಿಸಲು ಯತ್ನಿಸಿದರು. ಪೊಲೀಸರೂ ಹುಡುಗ ಹುಡುಗಿಯರ ಮೇಲೆಯೇ ರೇವ್ ಪಾರ್ಟಿ ಎಂದು ಆರೋಪಿಸಿ ಎಫ್ ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದರು. ಘಟನಾ ಸ್ಥಳದಲ್ಲಿ ಪೊಲೀಸರ ಜೊತೆಗಿದ್ದ ಎಲ್ಲಾ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರನ್ನು ಪೊಲೀಸರು ಬಿಟ್ಟು ಕಳಿಸಿದ್ದರು. ನಾನು “ಪತ್ರಕರ್ತನಾಗಿ ನಾನು ಸರಿಯಾಗಿದ್ದೀನಾ ?” ಎಂಬ ತಲೆಬರಹದಲ್ಲಿ ಅಂದೇ ರಾತ್ರಿ ಇಡೀ ಘಟನೆ ವಿವರಿಸಿ ಲೇಖನ ಬರೆದೆ. ಆ ಲೇಖನ ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡು ವೈರಲ್ ಆಗಿತ್ತು. ಆ ಬಳಿಕ “ನಿಜವಾಗಿ ನಡೆದಿದ್ದು ಬರ್ತ್ ಡೇ ಆಚರಿಸುತ್ತಿದ್ದ ಅಮಾಯಕರ ಮೇಲಿನ ದಾಳಿ. ಅಲ್ಲಿ ಯಾವ ರೇವ್ ಪಾರ್ಟಿಯೂ ನಡೆಯುತ್ತಿರಲಿಲ್ಲ. ಹಿಂದೂ ಜಾಗರಣಾ ವೇದಿಕೆಯಿಂದ ನಡೆದಿದ್ದು ಅಮಾನುಷ ದಾಳಿ. ಇಲ್ಲಿ ತಪ್ಪಿತಸ್ಥರು ಹಿಂದೂ ಜಾಗರಣಾ ವೇದಿಕೆಯ ದಾಳಿಕೋರರೇ ಹೊರತು ಹುಡುಗ ಹುಡುಗಿಯರಲ್ಲ” ಎಂಬ ಸ್ಪಷ್ಟತೆ ಜನರಿಗೂ, ಪೊಲೀಸರಿಗೂ ಬಂದಿತ್ತು. ಆದರೆ ಪೊಲೀಸರು ತಮ್ಮ ಜೊತೆಯೇ ಇದ್ದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರನ್ನು ಅದಾಗಲೇ ಬಂಧಿಸದೇ ಬಿಟ್ಟು ಬಿಟ್ಟಿದ್ದರು !
ಬಿಜೆಪಿ ಸರ್ಕಾರದ ದಿನಗಳು ಅವು. ಹೋಂ ಸ್ಟೇ ದಾಳಿ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಹಿಂದುತ್ವ ಸಂಘಟನೆಯ ಕಾರ್ಯಕರ್ತರನ್ನು ಆರೆಸ್ಟ್ ಮಾಡುವುದು ಪೊಲೀಸರಿಗೆ ಅನಿವಾರ್ಯವಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದುತ್ವ ಕಾರ್ಯಕರ್ತರನ್ನು ಬಂಧಿಸುವುದೇ ? ಇಂತಹ ಪರಿಸ್ಥಿತಿಯನ್ನು ತಂದಿಟ್ಟಿದ್ದ ನನ್ನ ವಿರುದ್ದ ಪೊಲೀಸ್ ಆಯುಕ್ತರು ಕೋಪಗೊಂಡಿದ್ದರು. ಪೊಲೀಸ್ ಆಯುಕ್ತರು ನನ್ನ ಗೆಳೆಯ, ಟಿವಿ9 ವರದಿಗಾರ ರಾಜೇಶ್ ರಾವ್ ಗೆ ದೂರವಾಣಿ ಕರೆ ಮಾಡಿ “ನವೀನ್ ನ್ಯೂಸ್ ಯಾಕೆ ಮಾಡಬೇಕಿತ್ತು. ಅವನಿಗೆ ಅಕ್ಕ-ತಂಗಿ ಇಲ್ವ ? ಅವರಿಗೆ ಹೊಡೆಯಲ್ವ ? ಅದನ್ನು ಟಿವಿಯಲ್ಲಿ ತೋರಿಸ್ತಾರಾ ? ನೋಡ್ಕೋತೀನಿ ನಾನು ಅವನನ್ನು. ಅವನು ಮಂಗಳೂರಿನಲ್ಲಿ ತಾಲಿಬಾನ್ ಸಂಸ್ಕೃತಿ ಇದೆ ಎಂದು ಹೇಳಿದ. ಅಸ್ಸಾಂನ ಘಟನೆಗೆ ಈ ಘಟನೆಯನ್ನು ಹೋಲಿಸಿ ಲೈವ್ ಕೊಟ್ಟ. ಈ ಬಾರಿ ಅವನನ್ನು ಬಿಡುವುದಿಲ್ಲ. ಈ ಕೇಸ್ ನಲ್ಲಿ ಅವನನ್ನು ಫಿಕ್ಸ್ ಮಾಡುತ್ತೇನೆ. ಅವನಿಗೆ ಎಷ್ಟು ಬೇಕಾದರೂ ಇಂಪ್ಲ್ಯೂಯನ್ಸ್ ಇರಲಿ. ಫಿಕ್ಸ್ ಮಾಡುವುದು ಮಾಡೋದೆ” ಎಂದು ಹೇಳಿದರು.
ಪೊಲೀಸರಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದುತ್ವ ಕಾರ್ಯಕರ್ತರನ್ನು ಬಂಧಿಸಲು ಇಷ್ಟವಿಲ್ಲದಿದ್ದರೂ ಬಂಧಿಸಲೇಬೇಕಿತ್ತು. ನಮ್ಮ ಕ್ಯಾಮರಾದಲ್ಲಿ ದಾಖಲಾಗಿರುವ ಆರೋಪಿಗಳ ಮುಖ ನೋಡಿ ಆರೋಪಿಗಳ ಪಟ್ಟಿ ತಯಾರಿಸಿದರು. ಜತೆಯಲ್ಲಿ ಇದ್ದ ಆರೋಪಿಗಳನ್ನು ಬಿಟ್ಟಿದ್ದ ಪೊಲೀಸರು ರಾತ್ರೋರಾತ್ರಿ ಆರೋಪಿಗಳಿಗಾಗಿ ಹುಡುಕಾಟ ನಡೆಸಬೇಕಾಯಿತು. ಕೆಲವರನ್ನು ಮನೆಯಿಂದಲೂ, ಇನ್ನೂ ಕೆಲವರನ್ನು ರೈಲು ನಿಲ್ದಾಣದಿಂದಲೂ ಬಂಧಿಸಲಾಯಿತು. ಆ ದಿನ ಕೇವಲ 8 ಮಂದಿಯಷ್ಟೇ ಬಂಧಿಸಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ನ್ಯಾಯಾಲಯದ ವಿಚಾರಣೆ ವೇಳೆಯಲ್ಲಿ ತನಿಖೆಯ ಭಾಗವಾಗಿದ್ದ ಪೊಲೀಸರು ಸರಿಯಾದ ರೀತಿ ಸಾಕ್ಷ್ಯವನ್ನೇ ನುಡಿದಿದ್ದರು. ವಶಪಡಿಸಿಕೊಂಡ ವಸ್ತುಗಳು, ಆರೋಪಿಗಳ ಐಡೆಂಟಿಫಿಕೇಶನ್, ಆರೋಪಿಗಳ ಭೀಬತ್ಸ ಕೃತ್ಯವೆಲ್ಲವನ್ನೂ ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ವಿವರಿಸಿದ್ದರು. ಸಂತ್ರಸ್ತ ಯುವಕ -ಯುವತಿಯರ ಪೈಕಿ ಮೂವರು ಸ್ಪಷ್ಟವಾಗಿ ಸಾಕ್ಷ್ಯ ನುಡಿದಿದ್ದರು. ನ್ಯಾಯಾಲಯದ ಪಾಟಿ ಸವಾಲಿನ ದಾಖಲೆಗಳನ್ನು ನೋಡಿದಾಗ 43 ಆರೋಪಿಗಳಲ್ಲದಿದ್ದರೂ ಒಂದಷ್ಟು ಹಿಂದೂ ಜಾಗರಣಾ ವೇದಿಕೆಯ ಆರೋಪಿಗಳಿಗೆ ಶಿಕ್ಷೆಯಾಗುವ ಭರವಸೆ ಇತ್ತು. ಆದರೆ ಸಾಕ್ಷ್ಯಾಧಾರಗಳ / ಆರೋಪಿಗಳ ಗುರುತಿಸುವಿಕೆಯ ಕೊರತೆಯಿಂದ 2024 ಆಗಸ್ಟ್ 06ರಂದು ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ.
“ಆ ಟೀ ಶರ್ಟ್ ನವನನ್ನು ಹಿಡಿಯಿರಿ. ಅವನೇ ದಾಳಿಯ ರೂವಾರಿಯಂತೆ ಕಾಣುತ್ತಿದ್ದಾನೆ” ಎಂದು ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ನುಡಿದಿದ್ದು ಈಗಲೂ ಅರಣ್ಯ ರೋದನದಂತೆ ಪ್ರತಿಧ್ವನಿಸುತ್ತಿದೆ