ಕರ್ನಾಟಕದಲ್ಲಿ ತಪ್ಪಿತು ಮತ್ತೊಂದು ದುರಂತ
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಡಿಭಾಗ್ ನಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕುಸಿದಿದೆ. 60 ವರ್ಷ ಹಳೆಯದಾದ ಸೇತುವೆ ಇದಾಗಿತ್ತು. ಭಾರೀ ಮಳೆಗೆ ರಾತ್ರಿ 1 ಗಂಟೆ ಸುಮಾರಿಗೆ ಒಮ್ಮಿಂದ ಒಮ್ಮೆಲೆ ಕುಸಿದು ಬಿದ್ದ ಘಟನೆ ನಡೆದಿದೆ.
ಕಾರವಾರ ಹಾಗೂ ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ 66 ರ ನಡುವಿನ ಸಂಪರ್ಕ ಸೇತುವೆ ಇದಾಗಿತ್ತು. ಸೇತುವೆಯ ಒಂದು ಭಾಗ ಕುಸಿದಿದೆ. ಈ ವೇಳೆ ಸೇತುವೆ ಮೇಲೆ ಲಾರಿ ಚಾಲನೆ ಮಾಡ್ತಿದ್ದ ತಮಿಳುನಾಡು ಮೂಲದ ಲಾರಿ ಚಾಲಕ ಬಾಲ್ ಮುರುಗನ್(37) ಸಮೇತ ಖಾಲಿ ಟ್ರಕ್ ನದಿಗೆ ಬಿದ್ದಿದೆ. ಕಾಳಿ ನದಿಯಲ್ಲಿ ಬಿದ್ದ ಲಾರಿಯ ಮುಂಭಾಗದ ಗ್ಲಾಸ್ ಒಡೆದು ಕ್ಯಾಬಿನ್ ಮೇಲೆ ನಿಂತು ಚಾಲಕ ಬಾಲ ಮುರುಗನ್ ರಕ್ಷಣೆಗೆ ಕೂಗಿದ್ದರು. ಸದ್ಯ ಬೀಟ್ ಪೊಲೀಸರ ಮುಂಜಾಗೃತೆಯಿಂದ ಲಾರಿ ಚಾಲಕನ ಪ್ರಾಣ ಉಳಿದಿದೆ.
ಸ್ಥಳೀಯ ಮೀನುಗಾರರು ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ಬೋಟ್ ಮೂಲಕ ಲಾರಿ ಚಾಲಕನನ್ನ ರಕ್ಷಿಸಿದ್ದಾರೆ. ಗೋವಾದಿಂದ ಹುಬ್ಬಳ್ಳಿ ಕಡೆ ಮಧ್ಯರಾತ್ರಿ ತೆರಳುತಿದ್ದ ತಮಿಳುನಾಡು ಮೂಲದ ಟ್ರಕ್ ಸೇತುವೆ ಮೇಲೆ ತೆರಳುತಿದ್ದಂತೆ ಮೊದಲ ಭಾಗ ಕುಸಿದಿದೆ ನಂತರ ಮೂರು ಕಡೆ ಕುಸಿದಿದೆ. ಸದ್ಯ ಟ್ರಕ್ ಚಾಲಕನ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್ಯದಲ್ಲಿ ಮತ್ತೊಂದು ದುರಂತ ನಡೆಯುವುದು ತಪ್ಪಿತು.