ಬಿಜೆಪಿ – ಜೆಡಿಎಸ್ ನಾಯಕರ ವಿರುದ್ಧ ಯೋಗೇಶ್ವರ್ ಬಂಡಾಯದ ಸಮರ; ಸಮಾವೇಶಕ್ಕೆ ಸಿದ್ದತೆ, ನಮ್ಮ ಶಾಸಕ – ನಮ್ಮ ಆಯ್ಕೆ. ಕರಪತ್ರ ಹಂಚಿಕೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪರಸ್ಪರ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಿದ ಪರಿಣಾಮ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿದ್ದಾರೆ. ಆದರೆ ಇದೀಗ ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ ಒಂದೊಂದೆೇ ಸಂಗತಿಗಳು ಹೊರಬೀಳುತ್ತಿದೆ. ಕಳೆದ ವಾರವಷ್ಟೇ ಎಚ್‌ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸಂಘಟಿಸಿರುವ ಪಾದಯಾತ್ರೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ದೇವೇಗೌಡ್ರ ಕುಟುಂಬಕ್ಕೆ ವಿಷ ಹಾಕಿದ ಪ್ರೀತಂ ಗೌಡ ಜೊತೆ ನನ್ನನ್ನೂ ಕೂರಿಸುತ್ತಾರೆ. ಈ ಪಾದಯಾತ್ರೆಗೆ ಜೆಡಿಎಸ್ ಹೋಗೋದಿಲ್ಲ ಎಂದು ಹೇಳಿದ್ದರು. ಆದರೆ ನಂತರ ಬಿಜೆಪಿ ವರಿಷ್ಠರು ಮಾತನಾಡಿ ಸಮಾಧಾನ ಪಡಿಸಿದ ನಂತರ ಪಾದಯಾತ್ರೆಗೆ ಜೆಡಿಎಸ್ ಬೆಂಬಲ ಇದೆ ಎಂದು ರಾಜ್ಯ ಬಿಜೆಪಿ ನಾಯಕರ ಜೊತೆಯಲ್ಲಿ ಹೇಳಿದ್ದರು.
ಇದೀಗ ಎಚ್‌ಡಿ ಕುಮಾರಸ್ವಾಮಿ ಕರ್ಮಭೂಮಿಯಾಗಿದ್ದ ರಾಮನಗರದಲ್ಲೇ ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಬಹಿರಂಗಗೊಂಡಿದೆ. ಅಸಲಿಗೆ ಸಂಸದರಾದ ಬಳಿಕ ಎಚ್‌ಡಿ ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಕುಮಾರಸ್ವಾಮಿ ರಾಜೀನಾಮೆ ಬಳಿಕ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಹತ್ತಾರು ಮಂದಿ ಉತ್ಸುಕದಲ್ಲಿದ್ದಾರೆ. ಅದರಲ್ಲಿ ಪ್ರಮುಖವಾಗಿ ಕೇಳಿ ಬಂದಿರುವ ಹೆಸರು ಬಿಜೆಪಿಯಿಂದ ಸಿಪಿ ಯೋಗೇಶ್ವರ್ ಅವರದ್ದು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಎಚ್‌ಡಿ ಕುಮಾರಸ್ವಾಮಿ ರಾಜೀನಾಮೆ ನೀಡುತ್ತಿದ್ದಂತೆ ಆಕ್ಟೀವ್ ಆಗಿದ್ದ ಸಿಪಿ ಯೋಗೇಶ್ವರ್, ಉಪಚುನಾವಣೆಯಲ್ಲೇ ತಾನೇ ಸ್ಪರ್ಧಿಸುವುದಾಗಿ ಹೇಳಿದ್ದರು.ಆದರೆ ಬಿಜೆಪಿ ಜೆಡಿಎಸ್ ಮೈತ್ರಿ ಆಗಿರುವುದರಿಂದ ಜೆಡಿಎಸ್ ಕೂಡ ಆ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಹವಣಿಸಿದ್ದು, ಹೀಗಾಗಿ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದಲೇ ಅಭ್ಯರ್ಥಿ ಹಾಕಲು ಸಿದ್ಧತೆ ನಡೆಸಲಾಗಿದೆ. ಈತನ್ಮಧ್ಯೆ ತನಗೆ ಎಷ್ಟೆ ಪ್ರಯತ್ನ ಮಾಡಿದರೂ ಸೂಕ್ತವಾದ ಸ್ಪಂದನೆ ಸಿಗದ ಕಾರಣ ತನಗೆ ಟಿಕೆಟ್ ಸಿಗುವ ಬಗ್ಗೆ ಸಿಪಿ ಯೋಗೇಶ್ವರ್‌ಗೆ ಅನುಮಾನ ಬಂದಿದೆ, ಹೀಗಾಗಿ ಬಂಡಾಯದ ಸುಳಿವನ್ನು ನೀಡಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮೈತ್ರಿ ಟಿಕೆಟ್ ಕೈತಪ್ಪುವ ಆತಂಕ ಬಿಜೆಪಿ MLC ಸಿಪಿ ಯೋಗೇಶ್ವರ್‌ಗೆ ಎದುರಾಗಿದ್ದು, ಹೀಗಾಗಿ ಸಮಾನ ಮನಸ್ಕರ ವೇದಿಕೆ ಹೆಸರಿನಲ್ಲಿ ಬಂಡಾಯದ ಕಹಳೆ ಊದಿದ್ದಾರೆ. ಈತನ್ಮಧ್ಯೆ ಇದೇ 11 ಕ್ಕೆ ಚನ್ನಪಟ್ಟಣದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದ್ದು, ನಗರದ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ಬಿಜೆಪಿ – ಜೆಡಿಎಸ್ ನಾಯಕರ ವಿರುದ್ಧ ಯೋಗೇಶ್ವರ್ ಬಂಡಾಯದ ಸಮರ ಸಾರಿದ್ದಾರೆ. ಈ ಸಮಾವೇಶಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಕರಪತ್ರಗಳನ್ನ ಹಂಚುವ ಮೂಲಕ ನಮ್ಮ ಶಾಸಕ – ನಮ್ಮ ಆಯ್ಕೆ ಎಂದು ಸಿಪಿ ಯೋಗೇಶ್ವರ್ ಮೈತ್ರಿಗೆ ಟಾಂಗ್ ಕೊಟ್ಟಿದ್ದಾರೆ. ಆ ಕರಪತ್ರದಲ್ಲಿ ಹೊರಗಿನವರಿಗೆ ಅವಕಾಶ ಇಲ್ಲ, ಸ್ಥಳೀಯರಿಗೆ ಆದ್ಯತೆ ಎಂದು ಬರೆಯಲಾಗಿದ್ದು, ಆ ಮೂಲಕ ಎಚ್‌ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್‌ಗೆ ನಯವಾಗಿಯೇ ಸಿಪಿ ಯೋಗೇಶ್ವರ್ ಸೆಡ್ಡು ಹೊಡೆದಿದ್ದಾರೆ.
ಒಂದು ವೇಳೆ ಮೈತ್ರಿ ಟಿಕೆಟ್ ತನಗೆ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಬಗ್ಗೆಯೂ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಬಿಜೆಪಿ MLC ಆಗಿದ್ದರೂ ಸಹ ಮೈತ್ರಿ ವಿರುದ್ಧ ಸಭೆ ಆಯೋಜನೆ ಮಾಡಿ ಸಾವಿರಾರು ಜನರನ್ನ ಸೇರಿಸಿ ಬಾಡೂಟ ಆಯೋಜನೆ ಮಾಡಲು ತಯಾರಿ ಮಾಡಿರುವುದು ಬಿಜೆಪಿ ಜೆಡಿಎಸ್ ನಾಯಕರಿಗೆ ಆತಂಕ ತರಿಸಿದೆ.