ಮುತಾಲಿಕರೇ.. ದುಡ್ಡಿಗಾಗಿ ಉತ್ತರ ಕರ್ನಾಟಕದಲ್ಲಿ ಟೈಗರ್ ಗ್ಯಾಂಗಿನ ನೆಪದಲ್ಲಿ ಎಷ್ಟು ಹಿಂದೂಗಳ ಹತ್ಯೆ ಮಾಡಿದ್ದೀರಿ? ಎಂದಿದ್ದ ಸುನೀಲ್ ಕುಮಾರ್!

ಕರಾವಳಿ

ಸುನಿಲ್ ಕುಮಾರ್ ವಿರುದ್ದದ ವಾರೆಂಟ್ ಗೆ ಹೈಕೋರ್ಟ್ ತಡೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ದಿಂದ ಬಿಜೆಪಿ ಅಭ್ಯರ್ಥಿಯಾಗಿ ಸುನೀಲ್ ಕುಮಾರ್ ಸ್ಪರ್ಧಿಸಿದ್ದರು. ಇವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸ್ಪರ್ಧಿಸಿದ್ದರು. ಆದರೆ ಮುತಾಲಿಕ್ ಸ್ಪರ್ಧೆಯಿಂದ ಸುನೀಲ್ ಕುಮಾರ್ ಗೆಲುವಿನ ಅಂತರ ಕಡಿಮೆಯಾಗಿತ್ತು. ಚುನಾವಣಾ ಫಲಿತಾಂಶದ ನಂತರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮೇ 14 ರಂದು ಕಾರ್ಕಳ ಬಂಡಿಮಠ ಬಸ್ ನಿಲ್ದಾಣದ ಬಳಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸುನೀಲ್ ಕುಮಾರ್, ಪ್ರಮೋದ್ ಮುತಾಲಿಕರೇ ಹಣಕ್ಕೋಸ್ಕರ ಉತ್ತರ ಕರ್ನಾಟಕದಲ್ಲಿ ಹಿಂದೂಗಳ ಹತ್ಯೆಯನ್ನು ಟೈಗರ್ ಗ್ಯಾಂಗಿನ ನೆಪದಲ್ಲಿ ಎಷ್ಟು ಬಾರಿ ಮಾಡಿಸಿದಿರಾ? ಆ ಹತ್ಯೆಯನ್ನು ಮಾಡಿದಂತಹವರು ಇವತ್ತಿಗೂ ಸಹ ಕಲಬುರ್ಗಿ ಜೈಲಿನಲ್ಲಿ ಇದ್ದಾರೆ ಎಂದಿದ್ದರು. ಹೀಗಾಗಿ ಸುನೀಲ್ ಕುಮಾರ್ ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ 2023 ರ ಸೆಪ್ಟೆಂಬರ್ 7 ರಂದು ಬೆಂಗಳೂರಿನ ಸಿಜೆಎಂ ಕೋರ್ಟ್ ಗೆ ಖಾಸಗಿ ದೂರು ಸಲ್ಲಿಸಿದ್ದರು. ಸುನೀಲ್ ಕುಮಾರ್ ಗೆ ವಾರೆಂಟ್ ಜಾರಿಯಾಗಿತ್ತು. ಅದನ್ನು ಪ್ರಶ್ನಿಸಿ ಸುನೀಲ್ ಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು.

ವಿಚಾರಣಾ ನ್ಯಾಯಾಲಯ ಜಾರಿ ಮಾಡಿರುವ ವಾರೆಂಟ್ ಪ್ರಶ್ನಿಸಿ ಸುನೀಲ್ ಕುಮಾರ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.

ಪಕ್ಷವು ವಿಪ್ ಜಾರಿ ಮಾಡಿದ್ದರಿಂದ ವಿಚಾರಣಾ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಸುನೀಲ್ ಕುಮಾರ್ ಪರ ವಕೀಲ ವಿನೋದ್ ಕುಮಾರ್ ನ್ಯಾಯಪೀಠದ ಗಮನಕ್ಕೆ ತಂದರು. ಅದನ್ನು ಪರಿಗಣಿಸಿದ ನ್ಯಾಯಮೂರ್ತಿಗಳು ಸುನೀಲ್ ಕುಮಾರ್ ವಿರುದ್ಧದ ವಾರೆಂಟ್ ಗೆ ತಡೆಯಾಜ್ಞೆ ನೀಡಿದರು.