ಉಪ್ಪಿನಂಗಡಿ ಪೊಲೀಸರ ಕಾರ್ಯಾಚರಣೆ; ಮಾದಕ ವಸ್ತು (MDMA) ಸಾಗಿಸುತ್ತಿದ್ದ ಆಟೋ ಚಾಲಕ ಸಹಿತ ಮೂವರ ಬಂಧನ.

ಕರಾವಳಿ

ಉಪ್ಪಿನಂಗಡಿ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಅವಿನಾಶ್ ಹೆಚ್ ಮತ್ತು ಸಿಬ್ಬಂದಿಗಳು ಪುತ್ತೂರು ತಾಲೂಕು ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಅದೇ ರಸ್ತೆಯಲ್ಲಿ ಬಂದ ಕೆಎ-21-ಸಿ-3003 ನೇ ನೋಂದಣಿ ಸಂಖ್ಯೆಯ ಅಟೋರಿಕ್ಷಾವನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದಾಗ, ನಿಲ್ಲಿಸದೇ ಮುಂದಕ್ಕೆ ಚಲಾಯಿಸಿ, ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ ಚಾಲಕ ಮತ್ತು ಹಿಂದಿನ ಸೀಟಿನಲ್ಲಿದ್ದ ವ್ಯಕ್ತಿಯು ವಾಹನದಿಂದ ಇಳಿದು ಓಡಲು ಪ್ರಯತ್ನಿಸಿರುತ್ತಾರೆ. ಸದ್ರಿ ಆರೋಪಿಗಳನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡದಿರುವ ಹಿನ್ನೆಲೆಯಲ್ಲಿ ವಾಹನದ ದಾಖಲಾತಿಗಳನ್ನು ಹಾಗೂ ವಾಹನವನ್ನು ತಪಾಸಣೆ ನಡೆಸಿದ್ದಾರೆ.

ಆ ಸಂದರ್ಭ ಅಟೋರಿಕ್ಷಾದಲ್ಲಿ ಸುಮಾರು 18,720 ರೂ ಮೌಲ್ಯದ 9.36 ಗ್ರಾಂ ನಿಷೇದಿತ ಎಂ.ಡಿ.ಎಂ.ಎ ಮಾದಕ ವಸ್ತು ಮತ್ತು 15 ಚಿಕ್ಕ ಚಿಕ್ಕ ಪ್ಲಾಸ್ಟಿಕ್ ತೊಟ್ಟೆಗಳು ಪತ್ತೆಯಾಗಿರುತ್ತದೆ. ಮುಂದಿನ ಕಾನೂನು ಕ್ರಮಕ್ಕಾಗಿ ಮಾದಕ ವಸ್ತುವನ್ನು , ಅಟೋರಿಕ್ಷಾವನ್ನು ಹಾಗೂ ಆರೋಪಿಗಳಾದ ಮೊಹಮ್ಮದ್ ನಾಸೀರ್ (24)ಗಡಿಯಾರ ನಿವಾಸಿ, ಕೆದಿಲ ಗ್ರಾಮ, ಬಂಟ್ವಾಳ ತಾಲೂಕು , ಮಹಮ್ಮದ್ ಆಸೀಫ್ .ಬಿ ಪ್ರಾಯ: 21 ವರ್ಷ ವಾಸ: ಏನಾಜೆ ಬುಡೋಳಿ , ಪೆರಾಜೆ ಗ್ರಾಮ, ಬಂಟ್ವಾಳ ತಾಲೂಕು, ಮತ್ತು ಸಿನಾನ್ ಎಂಬವರುಗಳನ್ನು ವಶಕ್ಕೆ ಪಡೆದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 94/2024 ಕಲಂ: U/s 8(c) 22(b) ಎನ್.ಡಿ.ಪಿ.ಎಸ್ ಕಾಯ್ದೆ ಮತ್ತು ಕಲಂ: 3(5) BNS 2023 ರಂತೆ ಪ್ರಕರಣ ದಾಖಲಿಸಲಾಗಿರುತ್ತದೆ.