ಪಡುಬಿದ್ರಿ- ಕಾರ್ಕಳ ರಸ್ತೆಯ ಟೋಲ್ ಗೇಟ್ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಕರವೇ ಎಂಟ್ರಿ; ಕಾಲ್ಕಿತ್ತ ಗುದ್ದಲಿ ಪೂಜಾ ತಂಡ

ಕರಾವಳಿ

ಹೆದ್ದಾರಿಯ ಇಕ್ಕೆಲಲ್ಲಿ ಕಲ್ಲುಗಳನಿಟ್ಟು, ಅರಸಿನ ಹುಡಿ, ಕುಂಕುಮ ಹರಡಿ, ಹೂ ಹಾಕಿ ಜನರನ್ನು ವಂಚಿಸುವ ನಾಟಕ

ವರದಿ: ಅನುಷಾ ಉಡುಪಿ

ಪಡುಬಿದ್ರಿ-ಕಾರ್ಕಳ ರಸ್ತೆ ಟೋಲ್ ಗೇಟ್ ಗುದ್ದಲಿಪೂಜೆ ನಡೆಸಲು ಬಂದ ತಂಡವನ್ನು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಆನ್ಸರ್ ಅಹಮದ್ ಅವರ ನೇತೃತ್ವದಲ್ಲಿ ಸಾರ್ವಜನಿಕರು ಸೇರಿ ಹಿಂದೆ ಕಳುಹಿಸಿದ ಘಟನೆ ಪಡುಬಿದ್ರಿಯ ಸುಜ್ಲಾನ್ ಕಂಪನಿಯ ಸಮೀಪ ನಡೆದಿದೆ.

ಪಡುಬಿದ್ರಿ ಕಾರ್ಕಳದ ಸಂಪರ್ಕ ರಸ್ತೆ ಆದ ರಾಜ್ಯ ಹೆದ್ದಾರಿ 1 ರಲ್ಲಿ ಟೋಲ್ ಗೇಟ್ ನಿರ್ಮಿಸುವುದನ್ನು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಮೊದಲಿನಿಂದಲೂ ವಿರೋಧಿಸುತ್ತಾ ಬಂದಿರುತ್ತದೆ. ಇತ್ತೀಚಿಗೆ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಾಸನದ ಕಂಪನಿಯೊಂದಕ್ಕೆ ಟೋಲ್ ಸಂಗ್ರಹ ಮಾಡಲು ಪರವಾನಗಿ ನೀಡಿತ್ತು. ಅದನ್ನು ವಿರೋಧಿಸಿ 23.07.2024 ರಂದು ಕರವೇ ಪತ್ರಿಕಾಗೋಷ್ಠಿಯನ್ನು ಕರೆದು ಬಲವಾದ ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ಇಂದು ಟೆಂಡರ್ ವಹಿಸಿಕೊಂಡಿರುವ ಹಾಸನ ಮೂಲದ ಕಂಪನಿಯ ಸಿಬ್ಬಂದಿಗಳು ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿ 1 ರ ಕಂಚಿನಡ್ಕ ಎಂಬಲ್ಲಿ ಏಕಾಏಕಿಯಾಗಿ ಟೋಲ್ ಗೇಟ್ ನಿರ್ಮಿಸಲು ಜಾಗವನ್ನು ಆಯ್ಕೆ ಮಾಡಿ ಅಲ್ಲಿ ಗುದ್ದಲಿ ಪೂಜೆಯನ್ನು ನಡೆಸಲು ಮುಂದಾಗಿದ್ದರು. ವಿಷಯ ತಿಳಿದ ಕರವೇ ಪದಾಧಿಕಾರಿಗಳು ಜಾಗಕ್ಕೆ ತೆರಳಿ ಸಂಬಂಧಪಟ್ಟ ದಾಖಲೆಗಳನ್ನು ಕೇಳಿದಾಗ ಕಂಪನಿಯ ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿ ನಡೆಯಿತು. ನಂತರ ಗುದ್ದಲಿ ಪೂಜೆ ಮಾಡಿದವರಿಂದಲೇ ಪೂಜೆ ಮಾಡಿ ಇಡಲಾದ ಕಲ್ಲು ಹಾಗೂ ಇತರ ಸಾಮಗ್ರಿಗಳನ್ನು ತೆರವುಗೊಳಿಸಲಾಯಿತು.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸರಕಾರಿ ಇಂಜಿನಿಯರ್ ಗಳು ಬಂದು ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರವೇ ಕೆಲಸ ಆರಂಭಿಸಿ ಎಂಬ ಎಚ್ಚರಿಕೆಯನ್ನು ನೀಡಿ ಕಂಪನಿಯ ಸಿಬ್ಬಂದಿಗಳನ್ನು ವಾಪಸ್ ಕಳುಹಿಸಿದರು.

ಈ ಕುರಿತು ಮಾತನಾಡಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ಭಾರತಿ ಕನ್ಸ್‌ಟ್ರಕ್ಷನ್ ಹೆಸರಿನ ಸಂಸ್ಥೆಯೊಂದು ಟೋಲ್ ಗೇಟ್ ನಿರ್ಮಾಣದ ಗುತ್ತಿಗೆಯನ್ನು ನಾವು ಪಡೆದುಕೊಂಡಿದ್ದೇವೆ, ಮುಂದಿನ ಸೋಮವಾರದಿಂದಲೇ ನಾವು ಕಾಮಗಾರಿ ಆರಂಭಿಸಲಿದ್ದೇವೆ ಎಂದು ತಂಡದ ಸದಸ್ಯನೊರ್ವ ಹೇಳಿದಾಗ, ನಾವು ಆತನಲ್ಲಿ ಪೂರಕ ದಾಖಲೆ ಪತ್ರಗಳನ್ನು ಕೇಳಿದ್ದು ಅದನ್ನು ನೀಡಲು ವಿಫಲನಾಗಿದ್ದಾನೆ. ಸುಜ್ಲಾನ್ ಕಂಪನಿಯ ಸಮೀಪ ರಾಜ್ಯ ಹೆದ್ದಾರಿ ಇಕ್ಕೆಲಲ್ಲಿ ಕಲ್ಲುಗಳನಿಟ್ಟು ಅದಕ್ಕೆ ಅರಸಿನ ಹುಡಿ, ಕುಂಕುಮ ಹರಡಿ, ಹೂ ಹಾಕಿ ಜನರನ್ನು ವಂಚಿಸುವ ನಾಟಕವಾದ್ದಾರೆ. ಜನ ಸೇರುತ್ತಿದಂತೆ ನಮ್ಮನ್ನು ಮನವೊಲಿಸುವ ಕೆಲಸ ಮಾಡಿದ್ದು, ಜನರು ಚೆನ್ನಾಗಿ ಉಗಿದ್ದಾರೆ. ಈ ಹಿಂದೆ ಬೆಳ್ಮಣ್ ಪ್ರದೇಶದಲ್ಲಿ ಬೇರೋಂದು ಗುತ್ತಿಗೆ ಕಂಪನಿ ಈ ಪ್ರಯತ್ನಕ್ಕೆ ಯತ್ನಿಸಿ ಕೈ ಸುಟ್ಟುಕೊಂಡಿತ್ತು, ಇದೀಗ ಈ ಭಾಗದಲ್ಲಿ ಪ್ರಯತ್ನ ನಡೆಸಲಾಗಿದೆ. ಟೋಲ್ ಗೇಟ್ ನಿರ್ಮಾಣ ನಡೆಸಬೇಕಿದ್ದರೆ ಪೂರಕ ಹೆದ್ದಾರಿ, ಮೂಲಭೂತ ಸೌಕರ್ಯಗಳ ನಿರ್ಮಾಣ ಮುಂತಾದವುಗಳು ಆಗಬೇಕಾಗಿದೆ ಅದ್ಯಾವುದರ ಬಗ್ಗೆ ಮುಂದಾಲೋಚನೆಯನ್ನೇ ಮಾಡದೆ ನೇರವಾಗಿ ಟೋಲ್ ಗೇಟ್ ನಿರ್ಮಾಣಕ್ಕೆ ಮುಂದಾಗಿರುವುದು ಹಾಸ್ಯಾಸ್ಪದಕ್ಕೆ ಕಾರಣವಾಗಿದೆ ಎಂದರು.

ಹತ್ತು ವರ್ಷಗಳ ಹಿಂದೆ ನಿರ್ಮಾಣವಾದ ರಸ್ತೆಗೆ ಈಗ ಟೋಲ್ ನಾಟಕವಾಗಿ ಜನರನ್ನು ಸುಲಿಯಲು ಮುಂದಾದರೆ ಪಡುಬಿದ್ರಿ- ಕಾರ್ಕಳದುದ್ದಕ್ಕೂ ಜನ ಇದನ್ನು ಹಿಮ್ಮೆಟ್ಟಿಸಲು ಸಮರ್ಥರಾಗಿದ್ದಾರೆ. ಬೆಳ್ಮಣ್ ಟೋಲ್ ಹೋರಾಟ ಸಮಿತಿಯೂ ಈ ಹೋರಾಟದಲ್ಲಿ ಸಕ್ರಿಯವಾಗಲಿದೆ ಎಂದರು.

ಸುಮಾರು ಐವತ್ತಕ್ಕೂ ಅಧಿಕ ಮಂದಿ ಸಾರ್ವಜನಿಕರು ಕೆಲವೇ ಕ್ಷಣಗಳಲ್ಲಿ ಘಟನಾ ಸ್ಥಳದಲ್ಲಿ ಜಮಾಹಿಸಿದ್ದು ಹೋರಾಟದ ಕಿಚ್ಚನ್ನು ಗುತ್ತಿಗೆ ಕಂಪನಿ ಅರ್ಥಯಿಸಿಕೊಂಡಿತು. ಜನ ಸೇರುತ್ತಿದಂತೆ ಸ್ಥಳಕ್ಕೆ ಭೇಟಿ ನೀಡಿದ ಪಡುಬಿದ್ರಿ ಪೊಲೀಸರು ಪರಿಸ್ಥಿತಿ ಕೈ ಮೀರದಂತೆ ನಿಯಂತ್ರಿಸಿದ್ದಾರೆ.