ಪಾದಯಾತ್ರೆ ಫ್ಲಾಪ್ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ; ವಿಜಯೇಂದ್ರ ವಿರುದ್ಧ ಗುಡುಗು.. ರೆಸಾರ್ಟ್ ನಲ್ಲಿ ರಹಸ್ಯ ಮೀಟಿಂಗ್.!

ರಾಜ್ಯ

ಬಿ.ಕೆ, ಡಿ.ಕೆ ಜೊತೆಯಾಗಿ ನಿಂತು ಕಾಂಗ್ರೆಸ್ ಒಗ್ಗಟ್ಟಿನ ಪ್ರದರ್ಶನ ತೋರಿಸುತ್ತಿದ್ದರೆ, ಇತ್ತ ಬಿಜೆಪಿ ಪಕ್ಷದಲ್ಲೇ ಬಂಡಾಯದ ಕಾವು ಏರುತ್ತಿದೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಸುತ್ತಾ ಮುಡಾ ಹಗರಣ ಸುತ್ತುತ್ತಿದ್ದಂತೆ ಉತ್ಸುಕಗೊಂಡಿದ್ದ ಬಿಜೆಪಿ ನಾಯಕರು ಕಾಂಗ್ರೆಸ್ ಸರಕಾರವನ್ನು ಉರುಳಿಸುವ ಉದ್ದೇಶದಿಂದ ಒಂಭತ್ತು ದಿನಗಳ ಕಾಲ ಮೈಸೂರಿನಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದರು. ಬಿಜೆಪಿ ನಾಯಕರು ಅಂದುಕೊಂಡಂತೆ ಪಾದಯಾತ್ರೆ ಅಭೂತಪೂರ್ವ ಯಶಸ್ಸು ಕಾಣಲು ವಿಫಲವಾಯಿತು. ಬಿಜೆಪಿ ನಡೆಸಿದ ಪಾದಯಾತ್ರೆಯಲ್ಲಿ ಮಿತ್ರಪಕ್ಷವಾದ ಜೆಡಿಎಸ್-ಬಿಜೆಪಿ ನಡುವಿನ ಹುಳುಕುಗಳು ಬಹಿರಂಗಗೊಂಡವು. ಇತ್ತ ಬಿಜೆಪಿಯ ಕೆಲವು ನಾಯಕರು ಪಾದಯಾತ್ರೆಯ ಕಡೆ ಮುಖ ಮಾಡಲೇ ಇಲ್ಲ. ಇದು ಒಂದರ್ಥದಲ್ಲಿ ವಿಜಯೇಂದ್ರ ಇಮೇಜ್ ವೃದ್ಧಿಸಿಕೊಳ್ಳಲಷ್ಟೇ ಸೀಮಿತವಾಯಿತು. ಪಕ್ಷಕ್ಕೆ ಯಾವುದೇ ನಿರೀಕ್ಷಿತ ಯಶಸ್ಸು ಸಿಗಲೇ ಇಲ್ಲ.

ಇತ್ತ ಬಿಜೆಪಿಯ ಪಾದಯಾತ್ರೆಯಿಂದ ದೂರ ಉಳಿದಿದ್ದ ಕೆಲವು ನಾಯಕರು ಇಂದು ಬೆಳಗಾವಿಯ ಖಾನಾಪುರ ತಾಲೂಕಿನ ಜಾಂಬೋಟಿ ಪಕ್ಕದ ರೆಸಾರ್ಟ್ ನಲ್ಲಿ ರಹಸ್ಯ ಮೀಟಿಂಗ್ ನಡೆಸಿರುವುದು ರಾಜಕೀಯ ವಲಯದಲ್ಲಿ ಬಿರುಸಿನ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಪ್ರಭಾವಿ ನಾಯಕರಾದ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಬಿಜೆಪಿ ಅತೃಪ್ತ ಶಾಸಕರು ಹಾಗೂ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಮೂಲಗಳ ಪ್ರಕಾರ ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ, ಅಣ್ಣಾ ಸಾಹೇಬ್ ಜೊಲ್ಲೆ, ಅರವಿಂದ ಲಿಂಬಾವಳಿ, ಬಿ ಬಿ ನಾಯಕ್ ಸೇರಿದಂತೆ ಹಲವಾರು ಮುಖಂಡರಿದ್ದರು ಎನ್ನಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಅತೃಪ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಬಿಜೆಪಿ ಮುಖಂಡರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪತ್ತಿನ ಕಾಲದಲ್ಲಿ ವಿರೋಧಿಗಳಾಗಿದ್ದ ಬಿ.ಕೆ, ಡಿ.ಕೆ ಜೊತೆಯಾಗಿ ನಿಂತು ಕಾಂಗ್ರೆಸ್ ಒಗ್ಗಟ್ಟಿನ ಪ್ರದರ್ಶನ ತೋರಿಸುತ್ತಿದ್ದರೆ, ಇತ್ತ ಸರಕಾರ ಉರುಳಿಸುವ ಯೋಜನೆಯಲ್ಲಿರುವ ಬಿಜೆಪಿಗೆ ಪಕ್ಷದಲ್ಲೇ ಬಂಡಾಯ ಕಾಣುತ್ತಿರುವುದು ಅರಗಿಸಿಕೊಳ್ಳಲಾಗುತ್ತಿಲ್ಲ. ಏನೋ ಮಾಡಲು ಹೋಗಿ ಇನ್ನೇನೋ ಆಯಿತು ಅನ್ನುವಂತಾಗಿದೆ ಬಿಜೆಪಿ ಒಟ್ಟಾರೆ ಪರಿಸ್ಥಿತಿ.