ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ರವರ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಮಮತಾ ಸಿಂಗ್ ಎಂಬುವವರು ಸಲ್ಲಿಸಿದ್ದ ಖಾಸಗಿ ದೂರಿನ ಮೇರೆಗೆ ತನಿಖೆಗೆ ಅನುಮತಿ ನೀಡಿದ್ದ ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಹಾಗೂ ಅದನ್ನು ರದ್ದುಪಡಿಸುವಂತೆ ಕೋರಿ ಅಲೋಕ್ ಕುಮಾರ್ ರವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ನಗರದ 39 ನೇ ಎಸಿಎಂಎಂ ಕೋರ್ಟ್ ಅರ್ಜಿದಾರರ ವಿರುದ್ಧ ನಡೆಸುತ್ತಿದ್ದ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸಿ ಆದೇಶಿಸಿದೆ.
ವಿಚಾರಣಾ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವಡಗಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಇಲ್ಲದೇ ಪ್ರಾಸಿಕ್ಯೂಷನ್‌ಗೆ ಒಳಪಡಿಸಲು ದಂಡ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 195 ರ ಅಡಿ ಅವಕಾಶವಿಲ್ಲ. ಇದರ ಹೊರತಾಗಿ ವಿಚಾರಣಾ ನ್ಯಾಯಾಲಯವು ಸಂಜ್ಞೆಯ ಅಪರಾಧವೆಂದು ಪರಿಗಣಿಸಿ ಪ್ರಾಸಿಕ್ಯೂಷನ್ ನಡೆಸಲು ಅನುಮತಿಸಿರುವುದು ಸೂಕ್ತವಲ್ಲ.
ಇನ್ನು ದೂರುದಾರರಾದ ಮಮತಾ ಸಿಂಗ್ ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ವಾದ ಪರಿಗಣಿಸಿದ ಹೈಕೋರ್ಟ್ ಅಲೋಕ್ ಕುಮಾರ್ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.