ಅಂಗನವಾಡಿ ಕಾರ್ಯಕರ್ತೆ ಸಮಯಪ್ರಜ್ಞೆ; ತಂದೆ-ತಾಯಿ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು
ಕಾನೂನು ಬಾಹಿರ ಮತ್ತು ಅನಧಿಕೃತವಾಗಿ ಮಗುವೊಂದನ್ನು ಮಾರಾಟ ಮಾಡಿರುವುದು ಹಾಗೂ ದತ್ತು ಸ್ವೀಕಾರ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಬಿಯಾ ಬಾನು, ಖಾಲಿದ್ ಸಯ್ಯದ್ ಹಾಗೂ ಮಗುವನ್ನು ಪಡೆದುಕೊಂಡ ವಾಜಿದ್ ವಿರುದ್ಧ ದೂರು ದಾಖಲಾಗಿದೆ.
ಜು.19 ರಂದು ರಾಬಿಯಾ ಬಾನು ಮತ್ತು ಖಾಲಿದ್ ಸಯ್ಯದ್ ಅವರಿಗೆ ಹೆಣ್ಣು ಮಗು ಜನಿಸಿದ್ದು, ಆ ಮಗು ತಂದೆ-ತಾಯಿಯ ವಶದಲ್ಲಿ ಇಲ್ಲದೇ ಇರುವ ಬಗ್ಗೆ ಆ.6 ರಂದು ಪೆರಂಪಳ್ಳಿಯ ಅಂಗನವಾಡಿ ಕಾರ್ಯಕರ್ತೆ ಸರಿತಾ ಡಿಸೋಜ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ಕೊಟ್ಟಿದ್ದರು. ಅದರಂತೆ ಮಕ್ಕಳ ರಕ್ಷಣಾ ಘಟಕದ ಸಾಮಾಜಿಕ ಕಾರ್ಯಕರ್ತರಾದ ಸುರಕ್ಷಾ, ಯೋಗೀಶ್ ಹಾಗೂ ಸರಿತಾ ಡಿಸೋಜ ಅವರು ಪೆರಂಪಳ್ಳಿಯ ಶೀಂಬ್ರಾ ಭಟ್ರಕೋಡಿಯಲ್ಲಿರುವ ರಾಬಿಯಾ ಬಾನು ಅವರ ಮನೆಗೆ ಭೇಟಿ ಕೊಟ್ಟಿದ್ದು, ಈ ವೇಳೆ ಮನೆಗೆ ಬೀಗ ಹಾಕಲಾಗಿತ್ತು.
ಖಾಲಿದ್ ಸಯ್ಯದ್ ಅವರಿಗೆ ಫೋನ್ ಕರೆ ಮಾಡಿದಾಗ ಆತ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ಸುರಕ್ಷಾ ಅವರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆ.7 ರಂದು ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ಠಾಣೆಗೆ ಕರೆ ತಂದಿದ್ದರು. ಮಗುವಿನ ಬಗ್ಗೆ ಆರೋಪಿಗಳಲ್ಲಿ ಸಮಾಲೋಚನೆ ನಡೆಸಿದಾಗ ಮಗುವನ್ನು ಮೂಲ್ಕಿಯ ನಿವಾಸಿ ವಾಜೀದ್ ಅವರಿಗೆ ನೀಡಿರುವುದಾಗಿ ತಿಳಿಸಿದ್ದರು. ಆರೋಪಿಗಳು ಮಗುವನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿದ್ದು ಮತ್ತು ಆರೋಪಿ ವಾಜಿದ್ ಮಗುವನ್ನು ಅನಧಿಕೃತವಾಗಿ ಪಡೆದುಕೊಂಡಿರುವುದಾಗಿ ಸುರಕ್ಷಾ ಅವರು ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಲ ನ್ಯಾಯ ಕಾಯಿದೆಯಂತೆ ಪ್ರಕರಣ ದಾಖಲಾಗಿದೆ.