ವಿಟ್ಲ: ಜನಪ್ರತಿನಿಧಿಗಳ, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಪೆರುವಾಯಿ ಗ್ರಾಮದಲ್ಲಿನ ಗಡಿಭಾಗದ ಸೇತುವೆ ವಾಹನ ಸವಾರರ ಪಾಲಿಗೆ ಮರಣದ ಸೇತುವೆಯಾಗಿದೆ. ಕರ್ನಾಟಕ-ಕೇರಳ ಗಡಿಭಾಗದ ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೇರಡ್ಕ ಹೊಳೆಗೆ ಸುಮಾರು ಅರವತ್ತು ವರ್ಷಗಳ ಹಿಂದೆ ಸೇತುವೆ ನಿರ್ಮಿಸಿದ್ದರು. ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆ ನೀರಿನಲ್ಲಿ ಸೇತುವೆ ಮುಳುಗಡೆಯಾಗಿ ಒಂದೆರಡು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ತಡೆಯಾಗುತ್ತಿದೆ. ನೀರಿನ ಪ್ರಮಾಣ ಕೆಳಗಿಳಿದ ಬಳಿಕ ವಾಹನಗಳ ಓಡಾಟ ಆರಂಭವಾಗುತ್ತಿದೆ.
ಪೆರುವಾಯಿ-ಬೆರಿಪದವು ಮೂಲಕ ಕೇರಳ ರಾಜ್ಯವನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ.
ಆದರೆ ಸೇತುವೆಯ ಎರಡು ಬದಿಗಳಲ್ಲೂ ಯಾವುದೇ ತಡೆಬೇಲಿಗಳಿಲ್ಲದ ಕಾರಣ ಈವರೆಗೆ ಹಲವು ಅಪಘಾತಗಳು ನಡೆದು ವಾಹನಗಳು ಹೊಳೆಗೆ ಬಿದ್ದಿವೆ. ಮಳೆ ನೀರಿನಲ್ಲಿ ಸೇತುವೆ ಮುಳುಗಡೆಯಾದರೆ ಜನರಿಗೆ, ವಾಹನ ಸವಾರರಿಗೆ ಗುರುತಿಸುವುದಕ್ಕಾಗಿ ರಚನೆಯಾಗಿರುವ ಸೇತುವೆಯ ಒಂದು ಬದಿಯ ಗುರುತು ಕಂಬ ಯಾವುದೇ ಕ್ಷಣ ಕುಸಿದು ಬೀಳುವ ಹಂತದಲ್ಲಿದೆ.
ಗಡಿಭಾಗದ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು, ದ್ವಿಚಕ್ರ ವಾಹನ ಸವಾರರು ಸೇತುವೆಯಲ್ಲಿ ಸಂಚರಿಸುವ ಸಂದರ್ಭ ಬಸ್ಸು, ಲಾರಿಗಳಂತಹ ದೊಡ್ಡ ವಾಹನಗಳು ಬಂದಲ್ಲಿ ಆಯತಪ್ಪಿ ಸೇತುವೆಯಿಂದ ಹೊಳೆಗೆ ಬಿದ್ದ ಪ್ರಕರಣಗಳೂ ಬಹಳಷ್ಟು ನಡೆದಿವೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಹಿಂದಿನ ಶಾಸಕರಿಗೆ, ಸಂಸದರಿಗೆ ಈ ಭಾಗದ ಜನ ಹಲವು ಬಾರಿ ದೂರು ನೀಡಿದ್ದಲ್ಲದೇ ಜಿಲ್ಲಾಧಿಕಾರಿಗಳು ಮಾಣಿಲ ಗ್ರಾಮಕ್ಕೆ ಬಂದಾಗ ಕೂಡಾ ವಿಷಯ ಪ್ರಸ್ತಾಪಿಸಿ ತಡೆ ಬೇಲಿ ನಿರ್ಮಿಸುವಂತೆ ಒತ್ತಾಯಿಸಿದ್ದರು. ಆದರೆ ಇಚ್ಛಾಶಕ್ತಿಯ ಕೊರತೆಯಿಂದಾಗಿ ಬಡಜನರ ಕೂಗಿಗೆ ಬೆಲೆ ಸಿಕ್ಕಿಲ್ಲವಾಗಿದೆ.