ವಿಟ್ಲ-ಅಡ್ಯನಡ್ಕದ ಕುದ್ದುಪದವು ಎಂಬಲ್ಲಿ ಅಪ್ರಾಪ್ತ ಬಾಲಕಿಗೆ ಅಂಗಡಿ ಮಾಲಿಕನಿಂದ ಲೈಂಗಿಕ ದೌರ್ಜನ್ಯ; ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

ಕರಾವಳಿ

ವಿಟ್ಲ-ಅಡ್ಯನಡ್ಕ ರಸ್ತೆಯ ಕುದ್ದುಪದವು ಜಂಕ್ಷನಲ್ಲಿರುವ ಎ.ಎಮ್.ಸ್ಟೋರ್ ಅಂಗಡಿ ಮಾಲಿಕ ಮಹಮ್ಮದ್ ಅಶ್ರಫ್(48) ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ಸೋಮವಾರ ಬೆಳಗ್ಗೆ ಸಾಮಾನು ಖರೀದಿಸಲು ಅಂಗಡಿ ಬಂದ ಅಪ್ರಾಪ್ತ ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಿದ ಪೋಷಕರು ಆರೋಪಿಯ ವಿರುದ್ಧ ಠಾಣೆಗೆ ದೂರು ನೀಡಿದ್ದರು. ಸುದ್ದಿ ಹಬ್ಬುತ್ತಿದ್ದಂತೆ ಹಿಂದೂ ಸಂಘಟನೆಗಳ ಮುಖಂಡರು ಠಾಣೆಗೆ ಆಗಮಿಸಿ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಈ ಮಧ್ಯೆ ದೂರು ದಾಖಲಾಗುತ್ತಿದ್ದಂತೆ ಆರೋಪಿ ಮಹಮ್ಮದ್ ಅಶ್ರಫ್ ಅಂಗಡಿಯಿಂದ ಪರಾರಿಯಾಗಿದ್ದಾನೆ. ಈ ಹಿಂದೆಯೂ ಎರಡು ಬಾರಿ ಈತನ ವಿರುದ್ಧ ಇಂತಹುದೇ ದೌರ್ಜನ್ಯ ಪ್ರಕರಣ ನಡೆಸಿದ್ದರೂ ತನ್ನ ಹಣ ಬಲದಿಂದಾಗಿ ಬಚಾವಾಗಿದ್ದಾನೆಂದು ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ತೆರಳಿ ಅಂಗಡಿಯಲ್ಲಿದ್ದ ಸಿಸಿ ಟಿವಿ ಪರಿಶೀಲನೆ ನಡೆಸಿದ್ದು, ಮಾಲಿಕನ ದುಷ್ಕೃತ್ಯ ದಾಖಲಾಗಿರುವ ಕಾರಣ ಡಿವಿಆರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.