ಮನೋರಂಜನೆ ಹೆಸರಿನಲ್ಲಿ ಯಕ್ಷಗಾನದ ವಿರೂಪ ಸಲ್ಲದು : ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು
ವರದಿ: ಅನುಷಾ ಉಡುಪಿ
ಉಡುಪಿ : ಮನೋರಂಜನೆ ಹೆಸರಿನಲ್ಲಿ ಯಕ್ಷಗಾನದ ವಿರೂಪ ಸಲ್ಲದು. ಪೌರಾಣಿಕ ಪ್ರಸಂಗಗಳಲ್ಲಿ ಪಾತ್ರದ ಸಾಂದರ್ಭಿಕತೆ, ಗಂಭೀರತೆಯನ್ನು ಅರಿತು ಕಲಾವಿದರು ಅಭಿನಯಿಸಬೇಕು ಎಂದು ಕರ್ನಾಟಕ ಯಕ್ಷಾಗನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಭಾನುವಾರ ಮೂಡಬಿದಿರೆಯ ಸಂಪಿಗೆ ಶ್ರೀ ದುರ್ಗಾ ಜ್ಯೋತಿಷ್ಯಾಲಯದಲ್ಲಿ ಗಾಳಿಮನೆ ಅಮ್ನಾಯ: ಯಕ್ಷ ಸಂಸ್ಕೃತಿ ಬಳಗದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ‘ಆಟ-ಕೂಟ-ನಾಟ್ಯ’ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.
ಯಕ್ಷಗಾನ ಪರಂಪರೆಯಲ್ಲಿ ವಿಶಿಷ್ಟವಾಗಿ ಮೂಡಿ ಬರುತ್ತಿದ್ದ ಆಟ -ಕೂಟಗಳಲ್ಲಿ ಅದೆಷ್ಟೋ ಪ್ರಖರ ಯಕ್ಷಗಾನ ವಿದ್ವಾಂಸರು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ವಿದ್ಯೆಯಿಲ್ಲದ ಕಲಾವಿದರು ಪ್ರಬುದ್ಧತೆಯನ್ನು ತೋರಿದ್ದಾರೆ. ಅಂತಹ ಮಹಾನ್ ಪ್ರತಿಭೆಗಳು ಇಂದು ವಿರಳವಾಗುತ್ತಿವೆ. ಇಂದು ಯಕ್ಷಗಾನ ಕಾಲಮಿತಿಯೊಳಗೆ ಬಂಧಿಯಾಗಿ ಆಧುನಿಕತೆಯ ಸೋಗಿನಲ್ಲಿ ಪ್ರದರ್ಶನಗೊಳ್ಳುತ್ತಿರುವುದನ್ನು ಕಂಡಾಗ ಮನಸ್ಸು ಭಾರವಾಗುತ್ತದೆ. ಯಕ್ಷಗಾನ ರಂಗ ಪ್ರಬುದ್ಧ ಕಲಾವಿದರಿಲ್ಲದೆ ಬಡವಾಗಬಾರದು. ಯಕ್ಷಗಾನ ಶಾಸ್ತ್ರೀವಾಗಿ ಮೂಡಿಬರಲು ನಾವೇನು ಮಾಡಬೇಕು ಎಂದು ಯಕ್ಷಗಾನ ಸಂಘಟಕರು, ಕಲಾವಿದರು, ಪ್ರೋತ್ಸಾಹಕರು, ಪ್ರೇಕ್ಷಕರು ಆತ್ಮ ವಿಮರ್ಶೆ ಮಾಡಿಕೊಳ್ಳುವ ಕಾಲ ಬಂದಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ ಅವರನ್ನು ಸನ್ಮಾನಿಸಲಾಯಿತು.
ಕಲಾಪೋಷಕ ಶ್ರೀಪತಿ ಭಟ್ಟ, ಯಕ್ಷಧ್ರುವ ಫೌಂಡೇಶನ್ ಮೂಡಬಿದ್ರೆ ಘಟಕದ ಅಧ್ಯಕ್ಷ ದಿವಾಕರ ಶೆಟ್ಟಿ ಖಂಡಿಗ, ಕಲಾಪೋಷಕ ಬಿ.ಚಂದ್ರಶೇಖರ ರಾವ್, ಮೂಡಬಿದ್ರೆಯ ಜವನೆರ್ ಬೆದ್ರ ಫೌಂಡೇಶನ್ ಅಧ್ಯಕ್ಷ ಅಮರ ಕೋಟೆ, ಸಂಸ್ಕೃತಿ ಬಳಗದ ಗೌರವ ಸಲಹೆಗಾರ ಡಾ.ಯೋಗೀ ಪಿ. ಸುಧಾಕರ ತಂತ್ರಿ, ಸಂಘಟನೆಯ ಗೌರವಾಧ್ಯಕ್ಷ ವಿದ್ವಾನ್ ಚಂದ್ರಶೇಖರ ಭಟ್ಟ ಗಾಳಿಮನೆ, ಅಧ್ಯಕ್ಷ ಡಾ.ವಿನಾಯಕ ಭಟ್ಟ ಗಾಳಿಮನೆ, ಯಕ್ಷಗಾನ ಕಲಾ ಸಂಘಟಕ ಭುಜಬಲಿ ಧರ್ಮಸ್ಥಳ ಮೊದಲಾದವರು ಉಪಸ್ಥಿತರಿದ್ದರು.