ಯುವ ವಕೀಲನ ಸಾವು ಅಪಘಾತದಿಂದ ಆದ ಸಾವಲ್ಲ; ಹಳೆಯ ಧ್ವೇಷದ ಹಿನ್ನೆಲೆಯಲ್ಲಿ ವ್ಯವಸ್ಥಿತ ಸಂಚಿನಿಂದ ನಡೆಸಿದ ಪ್ಲಾನಿಂಗ್ ಮರ್ಡರ್

ರಾಜ್ಯ

ಆ.8 ರಂದು ವಿಜಯಪುರದಲ್ಲಿ ನಡೆದಿದ್ದ ವಕೀಲನ ಸಾವು ಅಪಘಾತದಿಂದ ಆದ ಸಾವಲ್ಲ, ಹಳೆಯ ಧ್ವೇಷದ ಹಿನ್ನೆಲೆಯಲ್ಲಿ ವ್ಯವಸ್ಥಿತ ಸಂಚಿನಿಂದ ನಡೆಸಿದ ಪ್ಲಾನಿಂಗ್ ಮರ್ಡರ್ ಎಂಬುದು ಪೊಲೀಸರ ತನಿಖೆಯಲ್ಲಿ ಸಾಬೀತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿರುತ್ತಾರೆ. ತಲೆ ಮರೆಸಿಕೊಂಡಿರುವ ಇತರರ ಬಂಧನಕ್ಕೆ ತಂಡ ರಚಿಸಿ ತನಿಖೆ ನಡೆಸುತ್ತಿದ್ದಾರೆ.

ವಿಜಯಪುರ ನಗರದಲ್ಲಿ ಆ.8 ರಂದು ಸಂಜೆ 5-30 ರ ಸುಮಾರಿಗೆ ನಡೆದಿದ್ದ ಅಪಘಾತದಲ್ಲಿ ಇನ್ನೋವಾ ಕಾರಿನಲ್ಲಿ ಸಿಲುಕಿ ಸುಮಾರು ಎರಡೂವರೆ ಕಿ.ಮೀ. ದೂರಕ್ಕೆ ಎಳೆದೊಯ್ದ ಘಟನೆಯಲ್ಲಿ ನಗರದ ಯುವ ವಕೀಲ ರವಿ ಮೇಲಿನಕೇರಿ ಮೃತಪಟ್ಟಿದ್ದ. ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಪೊಲೀಸರಿಗೆ ಇದು ಅಪಘಾತದಿಂದ ಆಗಿರುವ ಸಾವಲ್ಲ, ಬೆಚ್ಚಿಬೀಳುವಂತ ಸಂಚು ರೂಪಿಸಿ ಹತ್ಯೆ ಎಂದು ಲಭ್ಯವಾದ ಸುಳಿವು ಆಧರಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ತುಳಸಿರಾಮ ಹರಿಜನ, ಅಲೆಕ್ಸ್ ಗೊಲ್ಲರ, ಷಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರುಗೇಶ ಉಳ್ಳಾಗಡ್ಡಿ ಬಂಧಿತ ಆರೋಪಿಗಳು. ದಿನಗೂಲಿ ಕಾರ್ಮಿಕರಾಗಿಕೊಂಡು ಕೆಲಸ ಮಾಡುತ್ತಿದ್ದ ಆರೋಪಿಗಳು ಅಪರಾಧ ಪ್ರಕರಣಗಳ ಹಿನ್ನೆಲೆ ಹೊಂದಿದ್ದಾರೆ. ಎಲ್ಲರ ಮೇಲೂ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಹತ್ಯೆ, ಹತ್ಯೆ ಯತ್ನ, ದರೋಡೆ, ಜೀವ ಬೆದರಿಕೆಯಂಥ ಪ್ರಕರಣ ದಾಖಲಾಗಿವೆ ಎಂದು ಎಸ್.ಪಿ ಹೃಷಿಕೇಶ್ ಭಗವಾನ್ ಮಾಹಿತಿ ನೀಡಿದ್ದಾರೆ.

ಆರೋಪಿಗಳು ಇತರರೊಂದಿಗೆ ಸೇರಿ ವಕೀಲ ರವಿ ಕೋರ್ಟ್‌ ನಿಂದ ಮನೆಗೆ ಹೊರಟಿದ್ದಾಗ ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ವಾಹನದಲ್ಲಿ ಬಂದು ಡಿಕ್ಕಿ ಹೊಡೆದಿದ್ದರು. ಡಿಕ್ಕಿಯ ಬಳಿಕ ಸುಮಾರು ಎರಡೂವರೆ ಕಿ.ಮೀ. ವರೆಗೆ ರವಿಯನ್ನು ರಸ್ತೆಯಲ್ಲೇ ಎಳೆದೊಯ್ದ ಕಾರಣ ರವಿ ಸ್ಥಳದಲ್ಲೇ ಮೃತಪಟ್ಟಿದ್ದ. ವಕೀಲ ರವಿ ತನ್ನ ಸಹೋದರರ ಜೊತೆ ಸೇರಿ ಸುಮಾರು 4-5 ತಿಂಗಳ ಹಿಂದೆ ತುಳಸಿರಾಮ ಹರಿಜನ ಎಂಬವನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದಲ್ಲದೇ ಸುಮಾರು 20 ದಿನಗಳ ಹಿಂದೆ ಇದೇ ಅಲೆಕ್ಸ್ ಗೊಲ್ಲರ ಎಂಬವನನ್ನು ಅಪಹರಿಸಿ, ಹತ್ಯೆ ಮಾಡುವ ಬೆದರಿಕೆ ಹಾಕಿದ್ದ. ಇದರಿಂದ ದ್ವೇಷ ಸಾಧಿಸುತ್ತಿದ್ದ ಈ ಹತ್ಯಾ ಸಂಚಿನ ಸೂತ್ರಧಾರ ತುಳಸಿರಾಮ, ತನ್ನ ಸ್ನೇಹಿತರಾದ ಪ್ರಕರಣದ ಬಂಧಿತ ಆರೋಪಿಗಳೊಂದಿಗೆ ಸೇರಿ ಅಪಘಾತ ಎಂಬಂತೆ ಬಿಂಬಿಸಲು ವ್ಯವಸ್ಥಿತವಾಗಿ ಸಂಚು ರೂಪಿಸಿ ಹತ್ಯೆ ಮಾಡಿದ್ದಾರೆ ಎಂದು ಎಸ್ಪಿ ವಿವರಿಸಿದರು.