ದೇಶದ ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಶಾಸಕ ಪೂಂಜಾ ವಿರುದ್ದ ಪ್ರಕರಣ ದಾಖಲಿಸಬೇಕು: ಶೇಖರ್ ಎಲ್

ಕರಾವಳಿ

ಚರಕದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ ಎನ್ನುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧಿ ಬಗ್ಗೆ ಹಗುರವಾಗಿ ಮಾತನಾಡಿದ ಪೂಂಜಾ

ಬೆಳ್ತಂಗಡಿ ತಾಲೂಕು ಆಡಳಿತದಿಂದ ನಡೆದ ಸ್ವಾತಂತ್ರ್ಯ ದಿನಾಚರಣೆ ಸಭಾಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಭಾಷಣ ದೇಶದ ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುವಂತಿತ್ತು. ಅವರ ಮೇಲೆ ದೇಶದ್ರೋಹಿ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಪುತ್ತೂರು ಉಪ ವಿಭಾಗದ ಜೀತ ಪದ್ಧತಿ ನಿರ್ಮೂಲನ ಸಮಿತಿ ಸದಸ್ಯ ಶೇಖರ್ ಎಲ್ ಒತ್ತಾಯಿಸಿದ್ದಾರೆ.

ಶಾಲಾ ಮಕ್ಕಳು, ಅಧಿಕಾರಿಗಳ ಸಮ್ಮುಖದಲ್ಲಿ ದ್ವೇಷ ಹುಟ್ಟಿಸುವ ಭಾಷಣ ಮಾಡಲಾಗಿದೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾದರೆ ಇಲ್ಲಿನ ಹಿಂದೂಗಳು ಬಾಂಗ್ಲಾದೇಶದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಹೇಳುವ ಮೂಲಕ ಶಾಲಾ ಮಕ್ಕಳ ಮನಸ್ಸನ್ನು ಕೆಡಿಸುವ ಮಟ್ಟಿಗೆ ಇಳಿದಿರುವುದು ಶಾಸಕರಿಗೆ ಮಾನಸಿಕ ಅಸ್ವಸ್ಥತೆಯ ಕಾಯಿಲೆ ಇರುವುದಕ್ಕೆ ಸಾಕ್ಷಿ.

ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್‌ ಪೂಂಜ ಅವರು ಪ್ರಚೋದನಕಾರಿಯಾಗಿ ಮಾತನಾಡಿದರು.

ಅಖಂಡ‌ ಭಾರತದ ವಿಭಜನೆಯಿಂದಾಗಿ ಹಿಂದೂಗಳಿಗೆ ಸಮಸ್ಯೆಯಾಗಿದೆ, ಅದರಿಂದಾಗಿಯೇ ಬಾಂಗ್ಲಾದೇಶದ, ಪಾಕಿಸ್ತಾನದ ಹಿಂದೂಗಳಿಗೆ ಶೋಚನೀಯ ಸ್ಥಿತಿ ಬಂದಿದೆ. ಹಿಂದೂಗಳಿಗಿರುವ ಏಕೈಕ ದೇಶ ಭಾರತ. ಅಂದು ಹಿಂದೂಗಳಿಗೆ ಭಾರತ, ಮುಸ್ಲಿಮರಿಗೆ ಪಾಕಿಸ್ತಾನ ಎಂದು ವಿಭಜನೆ ಮಾಡಿ, ದೇಶ ವಿಭಜನೆಯ ಹೆಸರಿನಲ್ಲಿ ಲಕ್ಷಾಂತರ ಹಿಂದೂಗಳ ಮಾರಣ ಹೋಮ‌ ಆಗಿದೆ. ಅದನ್ನು ನಾವು ಇಂದು ನೆನೆಯಬೇಕಾಗಿದೆ. ಈಗ ಬಾಂಗ್ಲಾ ದೇಶದ ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯಕ್ಕೆ ಅಂದು ನಾವು ಮಾಡಿದ ತಪ್ಪೇ ಕಾರಣವಾಗಿದೆ. ಬಹುಸಂಖ್ಯಾತ ಹಿಂದೂಗಳು ಭಾರತ ದಲ್ಲಿ ಅಲ್ಪಸಂಖ್ಯಾತರಾದರೆ ಬಾಂಗ್ಲಾದೇಶದ ಹಿಂದೂಗಳು ಅನುಭವಿಸುತ್ತಿರುವ ಸ್ಥಿತಿ ಭಾರತದಲ್ಲಿಯೂ ನಿರ್ಮಾಣ ವಾಗಲಿದೆ ಎಂಬುದನ್ನು ನೆನಪು ಮಾಡಬೇಕಾಗಿದೆ ಎಂದರು.

ಚರಕದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ ಎನ್ನುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹೋರಾಟದ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಅತ್ಯಂತ ಬೇಜಾವಬ್ದಾರಿತನ ಪ್ರದರ್ಶಿಸಿದ್ದಾರೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಜನಸಂಖ್ಯೆಯೇ ಹೆಚ್ಚಿರುವಾಗ ಹಿಂದೂಗಳು ಅಲ್ಪಸಂಖ್ಯಾತರಾಗುವುದಾದರೂ ಹೇಗೆ ಎಂಬ ತಲೆಬುಡವಿಲ್ಲದ ಭಾಷಣದ ಮೂಲಕ ತಾನೊಬ್ಬ ದ್ವೇಷ ಭಾಷಣಕ್ಕೆ ಸೀಮಿತವಾಗಿರುವ ಶಾಸಕ ಎಂಬುದನ್ನು ಶಾಲಾ ಮಕ್ಕಳ ಎದುರು ಸಾಬೀತು ಪಡಿಸಿದ್ದಾರೆ. ಶಾಸಕರು ತಮ್ಮ ಸುತ್ತ ಬಂದಿರುವ ಭ್ರಷ್ಟಾಚಾರದ ಆರೋಪಗಳಿಂದ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಈ ರೀತಿ ದ್ವೇಷ ಭಾಷಣ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ.