ಶಿವಣ್ಣನ ಸೇವಾ ಕಾರ್ಯಕ್ಕೆ ಜನರ ಶಹಬ್ಬಾಸ್.
ಜನಪ್ರತಿನಿಧಿಗಳ, ಅಧಿಕಾರಿಗಳ ಅಸಡ್ಡೆಯಿಂದಾಗಿ ಹೊಂಡ-ಗುಂಡಿಗಳಿಂದ ತುಂಬಿರುವ ಸಾಲೆತ್ತೂರು-ಮುಡಿಪು ರಸ್ತೆಯಲ್ಲಿ ಖಾಸಗಿ ಬಸ್ ಚಾಲಕರೊಬ್ಬರು ಏಕಾಂಗಿಯಾಗಿ ತೇಪೆ ಕಾರ್ಯ ನಡೆಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.
ವಿಟ್ಲ -ಸಾಲೆತ್ತೂರು-ಮುಡಿಪು-ಮಂಗಳೂರು ಮಧ್ಯೆ ಸಂಚರಿಸುವ ಅದ್ದಾದಿಯಾ ಹೆಸರಿನ ಖಾಸಗಿ ಬಸ್ ಚಾಲಕ ಶಿವಣ್ಣ ಎಂಬವರು ಏಕಾಂಗಿಯಾಗಿ ಶ್ರಮದಾನ ಮಾಡುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವಾಹನ ಸಂಚಾರ ಬಿಡಿ.. ಕನಿಷ್ಠ ನಡೆದಾಡಲೂ ಅಸಾಧ್ಯವಾದ ಈ ರಸ್ತೆ ದುಸ್ಥಿತಿ ಬಗ್ಗೆ ಯಾವೊಬ್ಬ ಜನಪ್ರತಿನಿಧಿಯೂ ಈವರೆಗೆ ಸ್ಪಂದಿಸಿಲ್ಲ. ಕೆ.ಎಂ.ಇಬ್ರಾಹಿಂ ಈ ಹಿಂದೆ ಶಾಸಕರಾಗಿದ್ದ ಸಂದರ್ಭ ಮುಡಿಪು-ಸಾಲೆತ್ತೂರು-ವಿಟ್ಲ ಸಂಪರ್ಕ ರಸ್ತೆ ರಾಜ್ಯ ಹೆದ್ದಾರಿ
(ಸಂಖ್ಯೆ101)ಯಾಗಿ
ಮೇಲ್ದರ್ಜೆಗೇರಿತ್ತು.
ಇದೀಗ ಅದೇ ರಾಜ್ಯ ಹೆದ್ದಾರಿಯಲ್ಲಿನ ಹೊಂಡ-ಗುಂಡಿಗಳಿಂದಾಗಿ ವಾಹನ ಸವಾರರು ಅಪಘಾತಕ್ಕೀಡಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ರಸ್ತೆಯಲ್ಲಿ ಸಂಚರಿಸುವ ವಾಹನಗಳು ಗುಂಡಿ ತಪ್ಪಿಸುವ ಸಂದರ್ಭ ಎದುರಿನಿಂದ ಬರುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಪದೇ ಪದೇ ಅಪಘಾತಗಳು ನಡೆಯುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲ. ರಸ್ತೆ ದುರವಸ್ಥೆಯಿಂದ ಬೇಸತ್ತ ಖಾಸಗಿ ಬಸ್ ಚಾಲಕ ಶಿವಣ್ಣ ಗುರುವಾರ ಮಧ್ಯಾಹ್ನದಿಂದ ಸಂಜೆವರೆಗೂ ಏಕಾಂಗಿಯಾಗಿ ಶ್ರಮದಾನ ನಡೆಸಿದ್ದಾರೆ. ತನ್ನದೇ ಆಟೋದಲ್ಲಿ ಜಲ್ಲಿ ಕಲ್ಲುಗಳು ಮತ್ತು ಮಣ್ಣು ತಂದು ಹೊಂಡ-ಗುಂಡಿಗಳಿಗೆ ಮುಕ್ತಿ ನೀಡಿದ್ದಾರೆ. ಈ ಬಗ್ಗೆ ಚಾಲಕ ಶಿವಣ್ಣ ಪ್ರತಿಕ್ರಿಯಿಸುತ್ತಾ “ನನಗೆ ಹೊಂಡ-ಗುಂಡಿಗಳಿಂದಾಗಿ ಕ್ಲಪ್ತ ಸಮಯದಲ್ಲಿ ಮಂಗಳೂರಿಗೆ ಬಸ್ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಟೈಮಿಂಗ್ ಸಮಸ್ಯೆಯಿಂದಾಗಿ ಪ್ರಯಾಣಿಕರಿಗೂ ಕಿರಿಕಿರಿಯಾಗುತ್ತಿದೆ. ರಸ್ತೆ ದುರವಸ್ಥೆ ಬಗ್ಗೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಹಲವರಲ್ಲಿ ಶ್ರಮದಾನ ಮಾಡುವ ಬಗ್ಗೆ ಮಾತನಾಡಿದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಅದಕ್ಕಾಗಿ ಇನ್ನೊಬ್ಬನನ್ನು ಬೇಡುವ ಬದಲು ನಾನೊಬ್ಬನೇ ನನ್ನ ಆಟೋದಲ್ಲಿ ಕಲ್ಲು-ಮಣ್ಣು ತಂದು ಅಳಿಲು ಸೇವೆ ಮಾಡುತ್ತಿದ್ದೇನೆ. ನನ್ನ ಕೆಲಸ ನನಗೆ ತೃಪ್ತಿ ಕೊಟ್ಟರೆ ಸಾಕೆಂದು ಹೇಳಿದ್ದಾರೆ. ಸ್ವಾತಂತ್ರ್ಯೋತ್ಸವವನ್ನು ಏಕಾಂಗಿಯಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸಿದ ಶಿವಣ್ಣನ ಹೃದಯವಂತಿಕೆ ಜನರ ಪ್ರಶಂಸೆಗೆ ಪಾತ್ರವಾಗಿದೆ. ಶಿವಣ್ಣನ ಜನಸೇವೆಯ ವೀಡಿಯೋ ವೈರಲ್ ಆಗುತ್ತಿದ್ದು ಇನ್ನಾದರೂ ಅಧಿಕಾರಿಗಳು, ಜನನಾಯಕರು ನರಕಸದೃಶ ರಸ್ತೆಗೆ ದುರಸ್ತಿ ಭಾಗ್ಯ ನೀಡುವರೋ ಕಾದುನೋಡಬೇಕಿದೆ.