ಇತ್ತೀಚಿಗೆ ಸುರಿದ ಬಾರಿ ಮಳೆಗೆ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಪಿಲಿಕಲ ರಸ್ತೆ ವ್ಯಾಪಕವಾಗಿ ಬಿರುಕು ಬಿಟ್ಟು ಜನ , ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಆ ಪ್ರದೇಶಕ್ಕೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಜನರು ತರಾಟೆಗೆ ತೆಗೆದುಕೊಂಡು ವಾಪಸ್ ಕಳುಹಿಸಿದ ಘಟನೆ ಇಂದು ನಡೆದಿದೆ.
ದ.ಕ ಜಿಲ್ಲೆಯಾದ್ಯಂತ ಕಳೆದ ಒಂದು ತಿಂಗಳುಗಳಿಂದ ಬಾರಿ ಮಳೆಯಾಗಿ ತಾಲೂಕಿನಾದ್ಯಂತ ವ್ಯಾಪಕವಾಗಿ ಪ್ರಾಕೃತಿಕ ವಿಕೋಪ ಸಂಭವಿಸಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮೈಸೂರಿನ ಪ್ರತಾಪ್ ಸಿಂಹ ಜೊತೆಗೆ ನಟೋರಿಯಸ್ ರೌಡಿ ಪುನೀತ್ ಕೆರೆಹಳ್ಳಿ ಎಂಬಾತನ ಪರವಾಗಿ ಬೆಂಗಳೂರು ಎಸಿಪಿ ಕಛೇರಿಗೆ ಹೋಗಿರುವುದಲ್ಲದೇ ಬಳಿಕ ಬಿಜೆಪಿ ಪಕ್ಷದ ಮೈಸೂರು ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸವಣಾಲು ಗ್ರಾಮದ ಪಿಲಿಕಲ ಪ್ರದೇಶ ಸೇರಿದಂತೆ ವಿವಿಧೆಡೆ ದ.ಕ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳ ತಂಡ ಭೇಟಿ ನೀಡಿದ್ದರು. ಆ ಬಳಿಕ ಈ ಪ್ರದೇಶದ ಜನರನ್ನು ತಾತ್ಕಾಲಿಕವಾಗಿ ಕಾಳಜಿ ಕೇಂದ್ರಕ್ಕೆ ಹೋಗಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದರೂ ಅಲ್ಲಿನ ಜನರು ಸಾಕುಪ್ರಾಣಿಗಳನ್ನು ಬಿಟ್ಟು ನಾವು ಕಾಳಜಿ ಕೇಂದ್ರಕ್ಕೆ ಬರಲು ಸಾಧ್ಯವಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು. ಬಳಿಕ ಅಧಿಕಾರಿಗಳು ಪರ್ಯಾಯ ರಸ್ತೆ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಇಂಜಿನಿಯರ್ ಗಳು ಆಗಮಿಸಿ ಅಂದಾಜು ಪಟ್ಟಿ ತಯಾರಿಸಿದ್ದರು.
ಇಷ್ಟೆಲ್ಲಾ ಆದ ಬಳಿಕ ಇಂದು ಬಿಜೆಪಿ ಪದಾಧಿಕಾರಿಗಳ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜಾರನ್ನು ಸ್ಥಳೀಯರು ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಭೀಕರತೆಯ ಸಂದರ್ಭದಲ್ಲಿ ನಮ್ಮ ಸಂಕಷ್ಟಕ್ಕೆ ಸ್ಪಂದಿಸದೆ ಈಗ ಬಂದು ಏನು ಪ್ರಯೋಜನ.? ಒಂದು ಹಂತದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರ ಮಧ್ಯೆ ಹೊಯ್ಕೈ ಹಂತಕ್ಕೆ ತಲುಪಿತು. ಏಕವಚನದಲ್ಲೂ ಮಾತುಕತೆ ನಡೆಯಿತು.
ಸಾರ್ವಜನಿಕರ ಪ್ರತಿರೋಧ ವ್ಯಾಪಕವಾದಗ ಶಾಸಕರು ಹಾಗೂ ಬಿಜೆಪಿ ಕಾರ್ಯಕರ್ತರು ಅಲ್ಲಿಂದ ವಾಪಸ್ ಬಂದರು. ಶಾಸಕ ಹರೀಶ್ ಪೂಂಜಾ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಅತ್ಯಂತ ಕೆಟ್ಟ ಪದಗಳನ್ನು ಉಪಯೋಗಿಸಿದ ಘಟನೆ ಕೂಡ ನಡೆಯಿತು. ಅಂತಿಂತೂ ಕೊನೆಗೂ ಶಾಸಕರ ನಡೆಯ ವಿರುದ್ಧ ಸಾರ್ವಜನಿಕರ ಸಹನೆಯ ಕಟ್ಟೆ ಒಡೆದು ಶಾಸಕರನ್ನು ಪ್ರಶ್ನಿಸುವ ಹಂತಕ್ಕೆ ತಲುಪಿರುವುದು ಶ್ಲಾಘನೀಯ ಎಂಬುದು ಶಾಸಕರ ವಿರೋಧಿಗಳು ಹೇಳುವಂತಾಗಿದೆ.