ಮರ್ಹೂಮ್ ಕೆ. ಹಾಜಿ ಉಮ್ಮರಬ್ಬ ಕೈಕಂಬ (ಅಮ್ಮುಂಜೆ) ಇವರ ಧರ್ಮಪತ್ನಿ ಮರಿಯಮ್ಮ ಇತ್ತೀಚೆಗಷ್ಟೇ ಅಗಲಿದ್ದರು. ಮರ್ಹೂಮ್ ಮರಿಯಮ್ಮ ರ 40 ನೇ ದಿನದ ದುವಾಃ ಕಾರ್ಯಕ್ರಮದಲ್ಲಿ ಅವರ ಮಕ್ಕಳು, ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಸಮಾಜ ಹಾಗೂ ಸಮುದಾಯಕ್ಕೆ ಉತ್ತಮ ಸಂದೇಶ ನೀಡಿದ್ದಾರೆ.
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಮತ್ತು ಶ್ರೀನಿವಾಸ ಆಸ್ಪತ್ರೆ ರಕ್ತನಿಧಿ ಮುಕ್ಕ ಸುರತ್ಕಲ್ ಸಹಯೋಗದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಇಕ್ಬಾಲ್ ಚಿಕನ್ ಸೆಂಟರ್ ರವರ ರಿಫಾಯಿನಗರ ಕೈಕಂಬದಲ್ಲಿರುವ ಮನೆಯಲ್ಲಿ ದುವಾಃ ಕಾರ್ಯಕ್ರಮದೊಂದಿಗೆ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು. ದುವಾಃ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಬಂಧಿಕರು, ಹಿತೈಷಿಗಳು, ಊರಿನ,ಪರ ಊರಿನ ಸಮಾಜ ಬಾಂದವರು, ಮರ್ಹೂಂ ಮರಿಯಮ್ಮರವರ ಮಕ್ಕಳು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ, ಸಮುದಾಯಕ್ಕೆ ಮಾದರಿಯಾದರು. ಈ ಶಿಬಿರದಲ್ಲಿ ಸರಿ ಸುಮಾರು 54 ಮಂದಿ ರಕ್ತದಾನ ಮಾಡುವ ಮೂಲಕ ಜೀವದಾನಿಯಾದರು. ಇವರ ಈ ಕಾರ್ಯ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು.