ಸಮೀರ್ ಹತ್ಯೆಯ ಹಿಂದೆ ಪೊಳಲಿ ಅನಂತು ಹತ್ಯೆ, ಟಾರ್ಗೆಟ್ ಇಲ್ಯಾಸ್ ಹತ್ಯಾ ಆರೋಪಿಯ ಪಾತ್ರ.! ತನಿಖಾಧಿಕಾರಿಯ ವೈಪಲ್ಯ.!
ಮಂಗಳೂರಿನಲ್ಲಿ ತಣ್ಣನೆ ಮಲಗಿದ್ದ ಮುಸ್ಲಿಂ ಅಂಡರ್ ವರ್ಲ್ಡ್ ಮತ್ತೆ ಬುಸುಗುಟ್ಟಿದೆ. ಮುಸ್ಲಿಂ ಗ್ಯಾಂಗ್ ನ ಬಲಾಬಲದ ಮಧ್ಯೆ ಉಳ್ಳಾಲದಲ್ಲಿ ನೆತ್ತರ ಕಾಳಗ ನಡೆದಿದೆ. ಪತ್ನಿ, ಮಕ್ಕಳು, ತಾಯಿಯ ಎದುರಲ್ಲೇ ರೌಡಿ ಶೀಟರ್ ಸಮೀರ್ ಕಡಪ್ಪರ ಮರ್ಡರ್ ನಡೆದಿದೆ.
ಈ ಹಿಂದೆ ಬಲಾಡ್ಯ ರೌಡಿಗಳ ತಂಡವೇ ಮಂಗಳೂರನ್ನು ಅಳುತ್ತಿತ್ತು. ರೌಡಿಸಂ ಫೀಲ್ಡಿನಲ್ಲಿ ಗುರುತಿಸಿಕೊಂಡವರು ವಿರೋಧಿ ಪಾಳೆಯದವನ ಹತ್ಯೆಗೆ ಬಂದರೆ ಆತ ಕುಟುಂಬದ ಜೊತೆಯಲ್ಲಿ ಇದ್ದರೆ ಕೊಲ್ಲದೆ ಹಿಂದೆ ಹೋಗುತ್ತಿದ್ದರು. ಏಕಾಂಗಿಯಾಗಿ ಯಾವಾಗ ಸಿಗುತ್ತಾನೆ ಎಂದು ಹೊಂಚು ಹಾಕಿ ಕುಳಿತಿರುತ್ತಿದ್ದರು. ಆ ಮಟ್ಟಿನ ರೌಡಿಸಂ ಫೀಲ್ಡಿನಲ್ಲಿ ಇತ್ತು. ಆದರೆ ಇಂದು ತಲವಾರು ಹಿಡಿಯಲು ಗೊತ್ತಿಲ್ಲದ ಚಿಲ್ಟು ಪಲ್ಟುಗಳೆಲ್ಲಾ ರೌಡಿಸಂ ನಲ್ಲಿ ವಿಜೃಂಭಿಸುತ್ತಿದ್ದಾರೆ. ಮಾನವೀಯತೆ ಮರೆತು ಕಟುಕರಂತೆ ವರ್ತಿಸುತ್ತಿದ್ದಾರೆ. ಇದೇ ಸಮೀರ್ ಮತ್ತಾತನ ಗ್ಯಾಂಗ್ ಈ ಹಿಂದೆ ಟಾರ್ಗೆಟ್ ಇಲ್ಯಾಸ್ ನ ಮನೆಗೆ ನುಗ್ಗಿ ಮಲಗಿದ್ದ ಇಲ್ಯಾಸ್ ಮೇಲೆ ಯದ್ವಾತದ್ವಾ ತಲವಾರು ಬೀಸಿ ತಾಯಿಯ ಎದುರೇ ಕಡಿದು ಕೊಂದಿದ್ದರು. ಇದೀಗ ಸಮೀರ್ ನನ್ನು ತಾಯಿ, ಪತ್ನಿ, ಮಕ್ಕಳ ಎದುರಲ್ಲೇ ಕೊಚ್ಚಿ ಕೊಂದಿದ್ದಾರೆ.
ಉಳ್ಳಾಲದಲ್ಲಿ ಟಾರ್ಗೆಟ್ ಗ್ರೂಪ್ ಕಟ್ಟಿ ಇಲ್ಯಾಸ್ ಮೆರೆದಾಡುತ್ತಿದ್ದ. ಉಳ್ಳಾಲ ಪೊಲೀಸ್ ಠಾಣೆ ಎದುರಲ್ಲೇ ಕಚೇರಿ ತೆರೆದು ದುಷ್ಕರ್ತ್ಯಕ್ಕೆ ಇಳಿದಿದ್ದ. ಮುಸ್ಲಿಂ ಅಂಡರ್ ವರ್ಲ್ಡ್ ಲೋಕದಲ್ಲಿ ಟಾರ್ಗೆಟ್ ಗ್ರೂಪ್ ಬಲಾಡ್ಯವಾಗಿತ್ತು. ಪೊಲೀಸರು ಮುಟ್ಟಲು ಹೆದರುತ್ತಿದ್ದರು. ಈ ಗ್ರೂಪ್ ಸಿಡಿದು ಮೂರು ಹೋಳಾಗಿತ್ತು. ಟಾರ್ಗೆಟ್ ಇಲ್ಯಾಸ್, ಒಂಭತ್ತುಕೆರೆಯ ದಾವೂದ್, ಸಫ್ವಾನ್ ಪರಸ್ಪರ ತಂಡ ಕಟ್ಟಿಕೊಂಡು ಹೊಡೆದಾಟಕ್ಕೆ ಇಳಿಯುತ್ತಿದ್ದರು. ಒಂಭತ್ತು ಕೆರೆಯ ದಾವೂದ್ ತಂಡದಲ್ಲಿ ಸಮೀರ್ ಗುರುತಿಸಿಕೊಂಡಿದ್ದ.
ಅದು 2018 ಜನವರಿ 13. ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಜೆಪ್ಪು ಮೊರ್ಗನ್ಸ್ ಗೇಟ್ ಬಳಿ ಟಾರ್ಗೆಟ್ ಇಲ್ಯಾಸ್ ನನ್ನು ಆತನ ಫ್ಲ್ಯಾಟ್ ಗೆ ತೆರಳಿ ದಾವೂದ್ ಸಹಚರರು ಹತ್ಯೆ ಮಾಡಿದ್ದರು. ಆ ತಂಡದಲ್ಲಿ ಇದ್ದವ ಇದೇ ಸಮೀರ್.
ಉಳ್ಳಾಲದಲ್ಲಿ ಸಮೀರ್ ಹವಾ ಜೋರಿತ್ತು. ಬಲಾಡ್ಯ ತಂಡ ಕಟ್ಟಿ ಮೆರೆದಾಡುತ್ತಿದ್ದ. ಈತನ ಪ್ರಭಾವಕ್ಕೆ ಮತ್ತೊಂದು ರೌಡಿಯ ತಂಡ ಬರಬರುತ್ತಾ ವೀಕ್ ಆದವು. ಸಮೀರ್ ಜೊತೆಗೆ ಹುಡುಗರು ಗುರುತಿಸಿಕೊಂಡಿದ್ದರು. ಉಪ್ಪಳದ ನಟೋರಿಯಸ್ ಗ್ಯಾಂಗ್ ನಡುವೆ ಸಮೀರ್ ನಿಗೆ ಗಳಸ್ಯ ಕಂಠಸ್ಯ ಸಂಬಂಧವಿತ್ತು. ಉಪ್ಪಳದ ಗೋಲ್ಡ್ ಸ್ಮಗ್ಲಿಂಗ್ ನಲ್ಲಿ 80 ಲಕ್ಷ ಲಪಟಾಯಿಸಿದ್ದನಂತೆ. ಈ ಕೇಸ್ ನಲ್ಲಿ ಸಮೀರ್ ಜೈಲು ಸೇರಿದ್ದ. ಟಾರ್ಗೆಟ್ ಇಲ್ಯಾಸ್ ನೊಂದಿಗೆ ನಂಟು ಹೊಂದಿದ್ದ ಕೆಲವರು ಜೈಲಿನಲ್ಲಿದ್ದರು. ಜೈಲಿನಲ್ಲೇ ಹೊಡೆದುರುಳಿಸುವ ಪ್ಲ್ಯಾನ್ ನಡೆದಿತ್ತು. ಜುಲೈ 11 ರಂದು ಮಾರಕಾಸ್ತ್ರಗಳೊಂದಿಗೆ ದಾಳಿಯೂ ನಡೆದಿತ್ತು. ಆಯುಷ್ಯ ಗಟ್ಟಿ ಇತ್ತು. ಸ್ವಲ್ಪದರಲ್ಲೇ ಸಮೀರ್ ಬಚಾವಾಗಿದ್ದ. ಬರ್ಕೆ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.
ಜೈಲಿನಲ್ಲಿ ನಡೆದ ದಾಳಿಯಿಂದ ಬಚವಾಗಿದ್ದ ಸಮೀರ್ ಒಂದು ತಿಂಗಳ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದ. ಅಗಸ್ಟ್ 11 ರಂದು ತೊಕ್ಕೊಟ್ಟು ಕಲ್ಲಾಪು ರೆಸ್ಟೋರೆಂಟ್ ಗೆ ತಾಯಿ, ಪತ್ನಿ ಮಕ್ಕಳೊಂದಿಗೆ ಬಂದಿದ್ದ. ಪಂಪ್ ವೆಲ್ ಗೆ ಹೋಗುವವನಿದ್ದ ಸಮೀರ್ ನಿಗೆ ಆತನ ಆಪ್ತನೊಬ್ಬನೆ ಪೋನ್ ಕರೆ ಮಾಡಿ ಕಲ್ಲಾಪು ಬಳಿ ನಿಲ್ಲುವಂತೆ ಹೇಳಿದ್ದಾನಂತೆ. ಸಮೀರ್ ನಿಗೆ ಕಾಲ್ ಮಾಡಿದ ಮಿತ್ರ ವಿಷಯವನ್ನು ಎದುರಾಳಿ ಟೀಮಿಗೆ ರವಾನಿಸಿರಬೇಕೆಂದು ಶಂಕೆ ಇದೀಗ ಕೇಳಿ ಬರುತ್ತಿದೆ. ಇದನ್ನು ನಂಬಿದ ಸಮೀರ್ ಪಾಸ್ಟ್ ಪುಡ್ ಗೆ ಇಳಿದು ಹೋಗುವಷ್ಟರಲ್ಲಿ ಫಾಲೋ ಮಾಡಿದ ಹಂತಕ ಪಡೆ ಅಟ್ಟಾಡಿಸಿ ಕೊಚ್ಚಿ ಕೊಂದು ಹಾಕಿದೆ. ಆತ್ಮೀಯನೇ ಸಮೀರ್ ನಿಗೆ ವಿಲನ್ ಆದನೇ.? ಸಮೀರ್ ಹತ್ಯೆ ಪ್ರಕರಣದ ತನಿಖಾಧಿಕಾರಿ ತನಿಖೆಯಲ್ಲಿ ಎಡವಿದರೇ.?
ಸಮೀರ್ ಕಡಪ್ಪರ ಹತ್ಯೆಗೆ ಟಾರ್ಗೆಟ್ ಇಲ್ಯಾಸ್ ರಿವೇಂಜ್ ಗೇಮ್ ಗೆ ಬಲಿಯಾಗಿದ್ದಾನೆ ಅನ್ನುವ ಮಾತು ಹರಿದಾಡುತ್ತಿದೆ. ಈ ನಡುವೆ ಇದೇ ಒಂದೇ ಕಾರಣಕ್ಕೆ ಹತ್ಯೆ ನಡೆದಿದ್ದಲ್ಲ ಅನ್ನುವ ಮಾತು ಹರಿದಾಡುತ್ತಿದೆ. ಉಳ್ಳಾಲದಲ್ಲಿ ಚಾರ್ಮ್ ಕಳೆದುಕೊಂಡ ಪ್ರಭಾವಿ ರೌಡಿಯೊಬ್ಬನಿಗೆ ಸಮೀರ್ ದಿನೇ ದಿನೇ ಬೆಳೆಯುತ್ತಿರುವುದು ಸಹಿಸಲು ಆಗಲಿಲ್ಲವಂತೆ. ಅನೈತಿಕ ಸಂಬಂಧವೊಂದರ ಗುಸುಗುಸು ಮ್ಯಾಟರ್ ಆಗಿತ್ತಂತೆ. ಹೀಗೆ ಮುಂದುವರಿಯಲು ಬಿಟ್ಟರೆ ಸಮೀರ್ ದೊಡ್ಡ ಡಾನ್ ಆಗುತ್ತಾನೆ. ನನ್ನ ಹವಾ ಏನೂ ನಡೆಯಲ್ಲ ಎಂಬ ಕಾರಣಕ್ಕೆ ಪ್ರಭಾವಿ ರೌಡಿಯೊಬ್ಬ ವಿರೋಧಿ ಗ್ಯಾಂಗ್ ನ ಸಖ್ಯ ಬಳಸಿ ಮುಗಿಸಿರಬೇಕು ಅನ್ನುವ ಮಾತು ಗಳು ಕೇಳಿ ಬರುತ್ತಿದೆ.
ಸಮೀರ್ ಮರ್ಡರ್ ನಡೆಯುತ್ತಿದ್ದಂತೆ ಪೊಲೀಸರು ಟಾರ್ಗೆಟ್ ಇಲ್ಯಾಸ್ ರಿವೇಂಜ್ ಗೇಮ್ ಎಂದು ಷರಾ ಬರೆಯುತ್ತಾರೆ. ಕೃತ್ಯದಲ್ಲಿದ್ದ ಕೆಲವರನ್ನು ಸರಂಡರ್ ಮಾಡುವಂತೆ ಒತ್ತಡ ಹೇರುತ್ತಾರೆ. ಆರೋಪಿಗಳಾದ ಕಿನ್ಯಾ ನಿವಾಸಿ ನಿಯಾಝ್, ಸುರತ್ಕಲ್ ಕೃಷ್ಣಾಪುರದ ಮುಹಮ್ಮದ್ ನೌಶಾದ್, ಬಜಾಲ್ ಶಾಂತಿನಗರದ ತನ್ವೀರ್ ಯಾನೆ ತನ್ನು, ಕಾಪು ಮಜೂರಿನ ಇಕ್ಬಾಲ್ ಯಾನೆ ಇಕ್ಕು ಸಮೀರ್ ಮರ್ಡರ್ ಕೇಸಿಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಸಮೀರ್ ಮರ್ಡರ್ ನಂತರ ಸಿಸಿಟಿವಿ ಫೂಟೇಜ್ ನಲ್ಲಿ ಪ್ರಭಾವಿ ರೌಡಿಯೊಬ್ಬನ ಚಹರೆ ಇದ್ದರೂ ಅದನ್ನು ಮರೆಮಾಚಿ ದೇಶ ಬಿಟ್ಟು ಹೋಗುವಂತೆ ಖುದ್ದು ಸಂಬಂಧ ಪಟ್ಟವರೇ ಹೇಳುತ್ತಿದ್ದಾರಂತೆ. ಪೊಲೀಸರು ಈ ಹಿಂದೆ ಜಿಲ್ಲೆಯಲ್ಲಿ ನಡೆದಿದ್ದ ಹತ್ಯೆಯ ಬಗ್ಗೆ ಅರಿವಿದ್ದಂತಿಲ್ಲ. ಪೊಳಲಿ ಅನಂತು ಮರ್ಡರ್ ಕೇಸಿನಲ್ಲಿ ಪೊಲೀಸರು ಎಡವಿ ನೈಜ ಆರೋಪಿಗಳನ್ನು ಬಂಧಿಸದೆ ಇದ್ದ ಪರಿಣಾಮ ಅದೇ ಕೊಲೆಯಲ್ಲಿ ಬಚಾವಾದವರು ಸುಖಾನಂದ ಶೆಟ್ಟಿ ಹತ್ಯೆ ಮಾಡುತ್ತಾರೆ. ಈ ಪ್ರಕರಣದಲ್ಲೂ ಪೊಲೀಸರು ಕೆಲವರನ್ನು ಬಚಾವ್ ಮಾಡಲು ಹೋದರೆ ಇನ್ನೊಂದಿಷ್ಟು ಹತ್ಯೆಗಳು ನಡೆಯುವ ಸಾಧ್ಯತೆ ಇದೆ. ಮಂಗಳೂರು ಪೊಲೀಸ್ ಕಮಿಷನರ್ ಸಾಹೇಬರು ಈ ಕೃತ್ಯದ ಹಿಂದಿನ ಕಾಣದ ಕೈಗಳನ್ನು ಬಯಲಿಗೆಳೆಯಬೇಕಿದೆ.