ಸ್ಪೆಷಲ್ ನ್ಯೂಸ್ ವರದಿ ಫಲಶ್ರುತಿ; ಕೊಕ್ಕೆ ಮಹೇಶ ಹಿಂಬಡ್ತಿ ನೀಡಿ ಮಂಗಳೂರು ಎ.ಸಿ ಕಚೇರಿಯಿಂದ ಎತ್ತಂಗಡಿ: ಜಿಲ್ಲಾಧಿಕಾರಿ ಆದೇಶ

ಕರಾವಳಿ

ಮಂಗಳೂರು ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ ಕೊಕ್ಕೆ ಮಹೇಶ ನನ್ನು ಹಿಂಬಡ್ತಿ ನೀಡಿ ಪುತ್ತೂರು ತಾಲೂಕು ಕಚೇರಿಗೆ ಎತ್ತಂಗಡಿ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಆದೇಶ ಪತ್ರ ಹೊರಡಿಸಿದ್ದಾರೆ. ಕೊಕ್ಕೆ ಮಹೇಶನ ರಂಪಾಟ, ಭ್ರಷ್ಟತೆಯ ಮುಖವಾಡವನ್ನು ಸ್ಪೆಷಲ್ ನ್ಯೂಸ್ ಪತ್ರಿಕೆ ಇಂಚಿಂಚಾಗಿ ವರದಿ ಮಾಡಿತ್ತು. ಸ್ಪೆಷಲ್ ನ್ಯೂಸ್ ವೆಬ್ ಪೋರ್ಟಲ್ ಕೂಡ ವರದಿ ಮಾಡಿದ್ದವು. ‘ಕೊಕ್ಕೆ ಮಹೇಶನ ಸೊಕ್ಕಿನ ಕಾರ್ಬಾರ್’ ಹೆಡ್ ಲೈನ್ ನೊಂದಿಗೆ ಪತ್ರಿಕೆ ಸವಿವರವಾಗಿ ವರದಿ ಪ್ರಕಟಿಸಿತ್ತು. ಈ ವರದಿ ಅಧಿಕಾರಿ ಮಟ್ಟದಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿತ್ತು. ಪತ್ರಿಕೆಯ ವರದಿ ಪ್ರಕಟವಾಗಿ ಎರಡೇ ದಿನದಲ್ಲಿ ಕೊಕ್ಕೆ ಮಹೇಶನ ಎತ್ತಂಗಡಿಯಾಗಿದೆ.

ಸಹಾಯಕ ಆಯುಕ್ತರ ಕಚೇರಿಗೆ ಬರುವ ಸಾರ್ವಜನಿಕರನ್ನು, ವಕೀಲರನ್ನು ಕಾಡುತ್ತಿದ್ದ ಕೊಕ್ಕೆ. ಕೊಕ್ಕೆಯ ಸೊಕ್ಕಿನ ಕಾರ್ಬಾರ್ ಹೆಚ್ಚಾದಂತೆ ಆತನ ಬಗ್ಗೆ ಪತ್ರಿಕೆ ಸಾಮಾಜಿಕ ನೆಲೆಯಲ್ಲಿ ವಿಸ್ತೃತ ವರದಿ ಪ್ರಕಟಿಸಿ ಆತನ ಮುಖವಾಡವನ್ನು ಕಳಚಿತ್ತು. ಇದೀಗ ಎ.ಸಿ ಕಚೇರಿಯಿಂದ ಎತ್ತಂಗಡಿ ಮಾಡಲಾಗಿದೆ. ಆ ಮೂಲಕ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.