ಸದ್ಯದಲ್ಲೇ ಕಂದಾವರ ಗ್ರಾಮ ಪಂಚಾಯತ್ ಗೆ ತಟ್ಟಲಿದೆ ಪ್ರತಿಭಟನೆಯ ಬಿಸಿ; ಹೇಳೋರಿಲ್ಲ.. ಕೇಳೋರಿಲ್ಲ ಇದು ಕಂದಾವರ ಗ್ರಾಮ ಪಂಚಾಯತ್ ಕಥೆ.

ಕರಾವಳಿ

ಹೇಳೋರಿಲ್ಲ.. ಕೇಳೋರಿಲ್ಲ ಇದು ಕಂದಾವರ ಗ್ರಾಮ ಪಂಚಾಯತ್ ಕಥೆ. ಕಳೆದ 23 ವರ್ಷಗಳಿಂದ ಇಲ್ಲಿನ ನಿರ್ವಸಿತರ ಪಾಡಂತೂ ನಾಯಿಪಾಡು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಸ್ತರಣೆ ಆಗುವ ಸಂಧರ್ಭದಲ್ಲಿ ಜಾಗ ಕಳೆದುಕೊಂಡು ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೌಹಾರ್ದ ನಗರ, ಕೊಳಂಬೆಗೆ ಬಂದ ನಿರ್ವಸಿತರ ಪಾಡು ಕೇಳುವವರಿಲ್ಲ.!

ಸರಿ-ಸುಮಾರು 200 ರಷ್ಟು ಶಾಲೆಗೆ ಹೋಗುವ ಮಕ್ಕಳಿದ್ದರೂ ಈವರೆಗೂ ಮಕ್ಕಳ ಅನುಕೂಲಕ್ಕಾಗಿ ಶಾಲೆ ತೆರೆಯುವ ಗೋಜಿಗೆ ಯಾರೂ ಹೋಗಿಲ್ಲ. ಮೂಲಭೂತ ಸೌಕರ್ಯದಿಂದ ಇಲ್ಲಿನ ನಿವಾಸಿಗಳು ವಂಚಿತರಾಗಿದ್ದಾರೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ, ಸರಿಯಾದ ರಸ್ತೆಯಾಗಲಿ, ಸರಿಯಾದ ದಾರಿದೀಪದ ವ್ಯವಸ್ಥೆ ಇಲ್ಲ. ಸಮುದಾಯ ಭವನವಿದ್ದರೂ ತೆರೆಯುವ ವ್ಯವಸ್ಥೆ ಮಾಡಿಲ್ಲ. ಮನೆ ಮಠ ಕಳಕೊಂಡು ಸುಮಾರು 23 ವರ್ಷ ಕಳೆದರೂ ನಿರ್ವಸಿತರ ಪಾಡು ನಾಯಿಪಾಡು ರೀತಿಯಾಗಿದೆ.

ಈ ಬಗ್ಗೆ ಅಲ್ಲಿನ ನಿವಾಸಿಗಳು ಕಂದಾವರ ಗ್ರಾಮ ಪಂಚಾಯತ್ ಗೆ ಹಲವು ಬಾರಿ ಮನವಿ ಮಾಡಿದರೂ ಈವರೆಗೂ ಕ್ರಮ ಕೈಗೊಂಡಿಲ್ಲ. ಇಲ್ಲಿನ ಜನರ ಕಣ್ಣೀರಿನ ಕಥೆ ಕೇಳುವವರಿಲ್ಲ. ಜನಪ್ರತಿನಿಧಿಗಳು ಈ ಬಗ್ಗೆ ಸೊಲ್ಲೆತ್ತುದಿಲ್ಲ. ಕೇವಲ ಮತ ಒತ್ತುವ ಯಂತ್ರವಾಗಿಬಿಟ್ಟಿದ್ದಾರೆ.

ರಸ್ತೆಗಳು ಮರಣಗುಂಡಿಯಾಗಿ ಪರಿವರ್ತನೆಯಾಗಿದೆ. ಬೀದಿನಾಯಿಗಳ ಕಾಟ, ಶೌಚಾಲಯದ ದುಸ್ಥಿತಿ ಹೀಗೆ ಹತ್ತಾರು ಸಮಸ್ಯೆಗಳ ಆಗರವಾಗಿದೆ. ಇನ್ನಾದರೂ ಗ್ರಾಮ ಪಂಚಾಯತ್ ಇಲ್ಲಿನ ಜನರ ಗೋಳಿಗೆ ಧ್ವನಿಯಾಗಲಿ. ಸಂಬಂಧಪಟ್ಟ ಇಲಾಖೆ, ಲೋಕೋಪಯೋಗಿ ಇಲಾಖೆ ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸದೇ ಇದ್ದರೆ ಸದ್ಯದಲ್ಲೇ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ ಸಮಿತಿ ವತಿಯಿಂದ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ. ಉತ್ತರದ ಕ್ಷೇತ್ರದ ಉತ್ತಮಕುಮಾರ ಸದಾ ಉದ್ರೇಕಕಾರಿ ಬಾಷಣ ಬಿಗಿಯುವ ಬೆಂಕಿ ಶಾಸಕರು ಅಬಿವೃದ್ದಿಯ ವಿಷಯದಲ್ಲಿ ತಣ್ಣಗಾಗಿದ್ದಾರೆ.! ಕಂದಾವರದ ಜನ ಪ್ರತಿನಿಧಿಗಳು ಮುಕ್ಕುವುದರಲ್ಲೇ ತಲ್ಲೀಣರಾಗಿದ್ದಾರೆ. ಅಯ್ಯೋ.. ಎಂಥಾ.. ಗತಿಬಂತು ಬುದ್ದಿವಂತರ ಜಿಲ್ಲೆಗೆ.?