ಬಾಂಗ್ಲಾ ಮಾದರಿ ದಂಗೆಗೆ ಐವನ್ ಸಂಚು.? ಕಾಂಗ್ರೆಸ್ ಶಾಸಕರ ವಿರುದ್ದ ದೂರು ದಾಖಲಿಸಿ ಕ್ರಮ ಕೈಗೊಳ್ಳಲು ಬಿಜೆಪಿ ಆಗ್ರಹ

ಕರಾವಳಿ

ಬೆಂಗಳೂರು: ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗುತ್ತಿರುವ ಮಂಗಳೂರು ಮೂಲದ ಕಾಂಗ್ರೆಸ್ ನಾಯಕ ಐವನ್ ಡಿಸೋಜ ಇದೀಗ ತಮ್ಮ ಲೂಸ್ ಟಾಕ್‌ನಿಂದಾಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.‌ ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ರಾಜ್ಯಪಾಲರನ್ನು ಬಾಂಗ್ಲಾದೇಶ ಮಾದರಿಯಲ್ಲಿ ಕೆಳಗಿಸುತ್ತೇವೆಂದು ಕಾಂಗ್ರೆಸ್ ಶಾಸಕರೂ ಆದ ಐವಾನ್ ಡಿಸೋಜಾ ಹೇಳಿದ್ದಾರೆಂದು ಬಿಜೆಪಿ ನಾಯಕ ಸಿ.ಟಿ.ರವಿ ಆರೋಪಿಸಿದ್ದಾರೆ. ಐವನ್ ಡಿಸೋಜಾ ವಿರುದ್ದ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಸಿ.ಟಿ.ರವಿ ಆಗ್ರಹಿಸಿದ್ದಾರೆ.

ಕಾಂಗ್ರೆಸ್ಸಿನ ಹತಾಶ ಮನಸ್ಥಿತಿಗಳು ಹೇಗೆಲ್ಲ ಕಾರ್ಯಾಚರಿಸುತ್ತವೆ ಎಂಬುದನ್ನು ಕಾಂಗ್ರೆಸ್ ವಿಧಾನ ಪರಿಷತ್‌ ಸದಸ್ಯ‌ ಐವನ್‌ ಡಿಸೋಜ ಬಿಚ್ಚಿಟ್ಟಿದ್ದಾರೆ ಎಂದು ಸಿ.ಟಿ‌.ರವಿ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ಬಾಂಗ್ಲಾದೇಶದ ಮಾದರಿಯಲ್ಲಿ ಕೆಳಗಿಳಿಸುತ್ತೇವೆ ಎಂಬ ಹೇಳಿಕೆಯ ಹಿಂದಿನ ಮರ್ಮವೇನು? ರಾಜಭವನಕ್ಕೆ ಕಾಂಗ್ರೆಸ್‌ ಪುಢಾರಿಗಳನ್ನು ನುಗ್ಗಿಸುತ್ತೀರಾ? ಎಂದು ಪ್ರಶ್ನಿಸಿರುವ ರವಿ, ಕಾಂಗ್ರೆಸ್‌ ಶಾಸಕರ ಈ ಹೇಳಿಕೆಗೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.

ಕೂಡಲೇ ಪರಿಷತ್ ಸದಸ್ಯರಾದ ಐವನ್ ಡಿಸೋಜ ಅವರ ವಿರುದ್ದ ದೂರನ್ನು ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಪೋಲಿಸ್ ಇಲಾಖೆಯ ಮಹಾನಿರ್ದೇಶಕರಿಗೆ ಸಿ.ಟಿ.ರವಿ ಮನವಿ ಮಾಡಿದ್ದಾರೆ.