ರೆಬೆಲ್ ಗಳೊಂದಿಗೆ ಮಾತುಕತೆಗೆ ಮುಂದಾದ ಬಿಜೆಪಿ ಹೈಕಮಾಂಡ್
ರಾಜ್ಯ ಬಿಜೆಪಿಗೆ ಸಂಘಟನಾತ್ಮಕವಾಗಿ ಸಣ್ಣ ಪ್ರಮಾಣದ ಸರ್ಜರಿ ಮಾಡಲು ಹೈಕಮಾಂಡ್ ಮುಂದಾಗಿದೆ. ರಾಜ್ಯ ಪದಾಧಿಕಾರಿಗಳಲ್ಲಿ ಕೆಲವರಿಗೆ ಕೊಕ್ ನೀಡಿ ಹೊಸ ಮುಖವನ್ನು ತರಲು ನಿರ್ಧರಿಸಿದೆ.
ನಾನಾ ಕಾರಣಗಳಿಂದ ರಾಜ್ಯ ಬಿಜೆಪಿಯ ಸಂಘಟನೆ ದಡ ಹತ್ತುತ್ತಿಲ್ಲ. ಆಂತರಿಕ ಸಂಘರ್ಷ ಒಂದೆಡೆಯಾದರೆ, ಮಿತ್ರ ಪಕ್ಷ ಜೆಡಿಎಸ್ ನ ಮನಸ್ಥಿತಿಗೆ ಪೂರಕವಾಗಿಯೂ ಹೆಜ್ಜೆ ಇಡಬೇಕಾಗಿದೆ. ಈ ದೃಷ್ಟಿಯಿಂದ ಕೆಲ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ.
ಇಬ್ಬರು ಪ್ರಧಾನಕಾರ್ಯದರ್ಶಿಗಳಿಗೆ ಗೇಟ್ ಪಾಸ್
ರಾಜ್ಯ ಬಿಜೆಪಿಯ ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ಬದಲಿಸಲಾಗುತ್ತಿದೆ. ಈ ಪೈಕಿ ಒಬ್ಬರು ಹಳೆ ಮೈಸೂರು ಪ್ರಾಂತ್ಯದವರು. ಮತ್ತೊಬ್ಬರು ಉತ್ತರ ಕರ್ನಾಟಕದ ಕಡೆಯವರು. ದೋಸ್ತಿ ಪಕ್ಷ ಜೆಡಿಎಸ್ ನಾಯಕರೊಂದಿಗೆ ಜಗಳ ಕಾಯುತ್ತಿರುವುದು ಪ್ರಧಾನ ಕಾರ್ಯದರ್ಶಿ ಯೊಬ್ಬರ ಸ್ಥಾನ ಕಿತ್ತುಕೊಳ್ಳುವ ಹಂತಕ್ಕೆ ಬಂದು ನಿಂತಿದೆ. ಹಾಗೆಯೇ ಮತ್ತೊಬ್ಬರು ಜಿಲ್ಲಾ ರಾಜಕಾರಣದ ಸಂಘರ್ಷಕ್ಕೆ ಬಲಿಪಶುವಾಗುವ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಹೇಳಲಾಗಿದೆ. ಇದಲ್ಲದೆ ಕಾರ್ಯದರ್ಶಿ ಸ್ಥಾನ ನಿಭಾಯಿಸುವ ಕೆಲವರನ್ನೂ ಬದಲಿಸಲು ತೀರ್ಮಾನಿಸಲಾಗಿದೆ. ಸದ್ಯದಲ್ಲೇ ಈ ಬಗ್ಗೆ ಅಂತಿಮ ತೀರ್ಮಾನ ಹೊರಬೀಳಲಿದೆ ಎಂದು ತಿಳಿದುಬಂದಿದೆ.
ರೆಬೆಲ್ ಗಳಿಗೆ ದಿಲ್ಲಿಯಲ್ಲೇ ಕ್ಲಾಸ್
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಶಾಸಕಾಂಗ ಪಕ್ಷದ ನಾಯಕ ಆರ್. ಅಶೋಕ್ ವಿರುದ್ಧ ಸಮರ ಸಾರಿರುವ ರೆಬೆಲ್ ಸ್ಟಾರ್ ಗಳಿಗೆ ದಿಲ್ಲಿಯಲ್ಲೇ ತಿಳಿ ಹೇಳಲು ಬಯಸಲಾಗಿದೆ. ಅತೃಪ್ತರ ಅಹವಾಲು ಆಲಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಲು ಹೈಕಮಾಂಡ್ ಮನಸ್ಸು ಮಾಡಿದೆ ಎನ್ನಲಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮಾತುಕತೆ ನಡೆಸುವುದಕ್ಕಿಂತಲೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಸೂಕ್ತ ಎನ್ನುವುದು ಅತೃಪ್ತರ ನಿಲುವು. ಈ ನಿಟ್ಟಿನಲ್ಲಿ ಅತೃಪ್ತರು ಅಮಿತ್ ಶಾ ಭೇಟಿಗೆ ಸಮಯ ಕೇಳುತ್ತಿದ್ದಾರೆ. ದಿಲ್ಲಿ ನಾಯಕರು ಮಾತುಕತೆಯ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.