ರಾಜ್ಯದಾದ್ಯಂತ ಭಾರೀ ಸುದ್ಧಿಯಾದ ಕಾರ್ಕಳ ಪರಶುರಾಮ ಮೂರ್ತಿ ಶಿಲ್ಪಿ ಕೃಷ್ಣ ನಾಯಕ್ ವಿರುದ್ಧದ ಕೇಸ್ ಗೆ ಹೈಕೋರ್ಟ್ ತಡೆ

ಕರಾವಳಿ

ರಾಜ್ಯದಾದ್ಯಂತ ಭಾರೀ ವಿವಾದವನ್ನೇ ಸೃಷ್ಟಿಸಿದ್ದ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಒಂದಿಲ್ಲೊಂದು ಸುದ್ದಿ ಮೂಲಕ ಮತ್ತೆ ಮುನ್ನೆಲೆಗೆ ಬಂದಿದೆ. ಕಾರ್ಕಳ ಬಿಜೆಪಿ-ಕಾಂಗ್ರೆಸ್ ಮಧ್ಯೆ ತೀವ್ರ ಫೈಟ್ ಗೆ ಕಾರಣವಾಗಿದ್ದ ಪರಶುರಾಮ ಥೀಮ್ ಪಾರ್ಕ್ ಹಲವು ಅಧಿಕಾರಿಗಳ ತಲೆದಂಡಕ್ಕೂ ಕಾರಣವಾಗಿತ್ತು. ಶಾಸಕ ಸುನಿಲ್ ಕುಮಾರ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಮೂರ್ತಿ ವಿಚಾರದಲ್ಲಿ ಭಾರೀ ಗೋಲ್ಮಾಲ್ ನಡೆದಿದ್ದು, ಕಂಚಿನ ಪ್ರತಿಮೆ ಬದಲು ಫೈಬರ್ ಮೂರ್ತಿ ಅಳವಡಿಸಿರುವುದಾಗಿ ಆರೋಪಗಳು ಕೇಳಿ ಬಂದಿತ್ತು. ರಾತ್ರೋರಾತ್ರಿ ಮೂರ್ತಿ ಕಾಣೆಯಾಗಿತ್ತು. ಈ ವಿವಾದವನ್ನು ಕಾಂಗ್ರೆಸ್ ದೊಡ್ಡ ಅಸ್ತ್ರವನ್ನಾಗಿ ಬಳಸಿಕೊಂಡು ಹಿಂದೂ ಸಂಘಟನೆಗಳ ಮುಖವಾಡವನ್ನು ಕಳಚಿ ಹಾಕಿತ್ತು. ಕಾರ್ಕಳದ ಗಲ್ಲಿ ಗಲ್ಲಿಗಳಲ್ಲಿ ಈ ವಿವಾದದ ಬಗ್ಗೆ ಪರ-ವಿರೋಧ ಹೇಳಿಕೆಗಳು ತಾರಕಕ್ಕೇರಿ ಬಿಜೆಪಿ ಪಕ್ಷಕ್ಕೆ ದೊಡ್ಡ ಇರಿಸು ಮುರಿಸಿಗೆ ಕಾರಣವಾಗಿತ್ತು. ಆದರೆ ಇದೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ. ಮೂರ್ತಿ ನಿರ್ಮಾಣದ ಹೊಣೆ ಹೊತ್ತಿದ್ದ ಶಿಲ್ಪಿ ಕೃಷ್ಣ ನಾಯಕ್ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಕೇಸ್ ಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶ ಹೊರಡಿಸಿದ್ದು, ಶಿಲ್ಪಿ ಕೃಷ್ಣ ನಾಯಕ್ ರಿಗೆ ರಿಲೀಫ್ ಸಿಕ್ಕಂತಾಗಿದೆ.

ಕಾರ್ಕಳದ ಕಾಂಗ್ರೆಸ್‌ ಮುಖಂಡ ಕೃಷ್ಣ ಶೆಟ್ಟಿ ಎಂಬವರು ಪರಶುರಾಮ ಮೂರ್ತಿ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ. ಪರಶುರಾಮನ ಮೂರ್ತಿ ನಿರ್ಮಾಣಕ್ಕೆ ಕಂಚಿನ ಬದಲು ಪೈಬರ್‌ ಬಳಕೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಕಾರ್ಕಳ ಪೊಲೀಸರು ಬೆಂಗಳೂರಿನಲ್ಲಿರುವ ಶಿಲ್ಪಿ ಕೃಷ್ಣ ನಾಯ್ಕ್‌ ಅವರ ಕೃಷ್‌ ಆರ್ಟ್‌ ವರ್ಕ್ಸ್‌ನಿಂದ ನಿರ್ಮಾಣ ಹಂತದಲ್ಲಿ ಮೂರ್ತಿಯನ್ನು ಕಾರ್ಕಳಕ್ಕೆ ಕೊಂಡೊಯ್ದಿದ್ದರು. ಇದೇ ವೇಳೆಯಲ್ಲಿಯೇ ಕಾಂಗ್ರೆಸ್‌ ಮುಖಂಡ ಉದಯ್‌ ಕುಮಾರ್‌ ಮುನಿಯಾಲು ಶಿಲ್ಪಿ ಕೃಷ್ಣ ನಾಯ್ಕ್‌ ಅವರಿಗೆ ಬೆದರಿಕೆ ಹಾಕಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಪರಶುರಾಮ ಥೀಮ್‌ ಪಾರ್ಕ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಹೈಕೋರ್ಟ್‌ ಏಕಸದಸ್ಯ ಪೀಠ ಮಹತ್ವದ ಆದೇಶವನ್ನು ಹೊರಡಿಸಿದೆ.
ಶಿಲ್ಪಿ ಕೃಷ್ಣ ನಾಯ್ಕ್‌ ಅವರ ಪರ ಖ್ಯಾತ ಹಿರಿಯ ವಕೀಲರಾದ ಅರುಣ್‌ ಶ್ಯಾಮ್‌ ಅವರು ವಾದ ಮಂಡಿಸಿದ್ದರು.