ಬಿಜೆಪಿ ಆಡಳಿತಾವಧಿಯಲ್ಲಿ ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರದ್ದುಪಡಿಸಿ, ಕಾಯ್ದೆಯ ಉಪಬಂಧ 79ಎ ಮತ್ತು 79ಬಿ ಮರು ಸ್ಥಾಪಿಸಲು ನಿರ್ಧರಿಸಿರುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂಗಳವಾರ ಏರ್ಪಡಿಸಿದ್ದ ಮಾಜಿ ಸಿಎಂ ಡಿ.ದೇವರಾಜ ಅರಸು 109ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾರ್ವಿುಕರ ಪರ ಹಿರಿಯ ಹೋರಾಟಗಾರ, ಮಾಜಿ ಸಚಿವ ಎಸ್.ಕೆ. ಕಾಂತ ಅವರಿಗೆ ಡಿ.ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಿದರು.
ಬಡವರಿಗೆ ನ್ಯಾಯ ಕೊಡಿಸಲೆಂದು ಅರಸು ಉಳುವವನೇ ಭೂಮಿ ಒಡೆಯನನ್ನಾಗಿಸಲು ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿದ್ದರು. ಆದರೆ ಬಡವರು, ಸಾಮಾಜಿಕ ನ್ಯಾಯ ಪರವಾಗಿಲ್ಲದ ಬಿಜೆಪಿ ಉಳ್ಳವನೇ ಭೂಮಿ ಒಡೆಯನಾಗಲು ಅವಕಾಶ ಕಲ್ಪಿಸಿದೆ. ಅರಸು ಕಾಲದ ಭೂಸುಧಾರಣಾ ಕಾಯ್ದೆ 1961ರ ಉಪಬಂಧ 79ಎ ಮತ್ತು ಬಿ ರದ್ದುಪಡಿಸಿದೆ. ಇದರೊಂದಿಗೆ ಕೃಷಿ ಕುಟುಂಬದವರು ಮಾತ್ರ ಕೃಷಿ ಭೂಮಿ ಖರೀದಿಸಬೇಕು, ಕೃಷಿ ಆದಾಯದ ಮಿತಿ 25 ಲಕ್ಷ ರೂ. ಒಳಗಿದ್ದವರು ಮಾತ್ರ ಜಮೀನು ಖರೀದಿ ಮಾಡಬಹುದು ಎಂಬುದನ್ನು ಕೊನೆಗೊಳಿಸಿದೆ.
ಕಾಯ್ದೆ ರದ್ದಾದ ಬಳಿಕ ವಿಚಾರಣೆಗೆ ಬಾಕಿಯಿದ್ದ 13 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಕೈಬಿಟ್ಟು, ಉಳ್ಳವರಿಗೆ ಅನುಕೂಲ ಮಾಡಿಕೊಟ್ಟಿದೆ. ಬಡವರ ವಿರೋಧಿಯಾದ ಕಾಯ್ದೆ ತಿದ್ದುಪಡಿ ರದ್ದು ಮಾಡಿ 79ಎ ಮತ್ತು ಬಿಮರು ಸ್ಥಾಪಿಸಲಾಗುವುದು. ವಿಧಾನ ಪರಿಷತ್ನಲ್ಲಿ ಪಕ್ಷ ಬಹುಮತ ಪಡೆಯುವುದಕ್ಕಾಗಿ ಕಾಯುತ್ತಿರುವೆ. ನಿರೀಕ್ಷಿತ ಬಲ ಪಡೆದ ನಂತರ ಅರಸು ಕಾಲದ ಉಳುವವನೇ ಭೂಮಿ ಒಡೆಯ ಕಾನೂನು ಮತ್ತೆ ಜಾರಿಗೊಳಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.