ಗ್ರಾಹಕರಿಗೆ ಸಾಲ ತೆಗೆದುಕೊಳ್ಳಿ ಎಂದು ಮುಗಿ ಬೀಳುತ್ತಿರುವ ಬ್ಯಾಂಕ್ ಗಳು ಸಾಲ ನೀಡಲು ಹಣವಿಲ್ಲದೆ ಪರದಾಡುತ್ತಿದೆ. ಬ್ಯಾಂಕ್ ಗಳಲ್ಲಿ ದುಡ್ಡೇ ಇಲ್ಲ.!

ರಾಷ್ಟ್ರೀಯ

ಒಂದು ಕಡೆ ಗ್ರಾಹಕರಿಗೆ ಸಾಲ ತೆಗೆದುಕೊಳ್ಳಿ ಎಂದು ಮುಗಿ ಬೀಳುತ್ತಿರುವ ಬ್ಯಾಂಕ್ ಗಳು ಮತ್ತೊಂದೆಡೆ ಸಾಲ ನೀಡಲು ಹಣವಿಲ್ಲದೆ ಪರದಾಡುತ್ತಿದೆ. ಇದೇ ಮೊದಲ ಬಾರಿಗೆ ದೇಶದ ವಾಣಿಜ್ಯ ಬ್ಯಾಂಕ್ ಗಳು ವಿವಿಧ ಮೂಲಗಳಿಂದ ಪಡೆದುಕೊಂಡ ಸಾಲದ ಮೊತ್ತ 9 ಲಕ್ಷ ಕೋಟಿ ರೂಪಾಯಿ ದಾಟಿದೆ. ಇದು ಆರ್ ಬಿ ಐ ಮತ್ತು ಕೇಂದ್ರ ಸರಕಾರವನ್ನೇ ದಿಗ್ಮೂಢಗೊಳಿಸಿದೆ.

ಬ್ಯಾಂಕ್ ಗಳಿಂದ ಸಾಲ ಪಡೆಯುವವರ ಸಂಖ್ಯೆ ಏರುತ್ತಿದೆ. ಠೇವಣಿ ಇಡುವವರ ಸಂಖ್ಯೆ ಕುಗ್ಗುತ್ತಿದೆ. ಹೀಗಾಗಿ ಠೇವಣಿ ಹಣ ಇಲ್ಲದೆ ಗ್ರಾಹಕರಿಗೆ ಸಾಲ ನೀಡಲು ಬ್ಯಾಂಕ್ ಗಳು ಹಣಕ್ಕಾಗಿ ವಿವಿಧ ಮೂಲಗಳನ್ನು ಆಶ್ರಯಿಸಬೇಕಾಗಿ ಬಂದಿದೆ. 15 ದಿನಗಳಿಗೊಮ್ಮೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಿಸುವ ದತ್ತಾಂಶದ ಪ್ರಕಾರ ಜುಲೈ 26 ರ ವೇಳೆಗೆ ಬ್ಯಾಂಕ್ ಗಳು ಪಡೆದುಕೊಂಡಿರುವ ಸಾಲ 9.32 ಲಕ್ಷ ಕೋಟಿ ರೂಪಾಯಿ ತಲುಪಿದೆ. ಇದು ಏಪ್ರಿಲ್ 5 ರ ಮೊತ್ತಕ್ಕೆ ಹೋಲಿಸಿದರೆ ಶೇಕಡಾ 20 ರಷ್ಟು ಹೆಚ್ಚಾಗಿದೆ.

ಬ್ಯಾಂಕ್ ಗಳ ನಡುವೆ ಸಾಲ ಹಾಗೂ ಬಾಂಡ್ ಮೊದಲಾದ ಮೂಲಗಳಿಂದ ವಾಣಿಜ್ಯ ಬ್ಯಾಂಕ್ ಗಳು ಹಣವನ್ನು ಹೊಂದಿಸಿ ಕೊಳ್ಳುತ್ತವೆ. ಈ ವರ್ಷ ಸರಾಸರಿ ಸಾಲದ ಪ್ರಮಾಣ 7.99 ಲಕ್ಷ ಕೋಟಿ ರೂಪಾಯಿ ಆಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 45 ರಷ್ಟು ಹೆಚ್ಚಾಗಿದೆ. ಜುಲೈ 26 ರ ವೇಳೆಗೆ ಗ್ರಾಹಕರಿಗೆ ನೀಡುತ್ತಿರುವ ಸಾಲ ಶೇಕಡಾ 15.1 ರಷ್ಟು ಏರಿಕೆ ಕಾಣುತ್ತಿದ್ದರೆ, ಠೇವಣಿ ಪ್ರಮಾಣ ಶೇಕಡಾ 11 ರ ವೇಗದಲ್ಲಿ ಬೆಳವಣಿಗೆ ಕಾಣುತ್ತಿದೆ. ಏಪ್ರಿಲ್ 2022 ರಿಂದ ದೇಶದಲ್ಲಿ ಇದೇ ಪರಿಸ್ಥಿತಿ ಇದ್ದು, ಠೇವಣಿ ಹಾಗೂ ಸಾಲದ ನಡುವಿನ ಅಂತರ ಹೆಚ್ಚುತ್ತಲೇ ಇದೆ.