ಸಚಿವ ಸಂಪುಟದ ವಿಸ್ತರಣೆ; ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ರಾಜ್ಯ ನಾಯಕರಿಗೆ ಮಹತ್ವದ ಸಂದೇಶ ರವಾನಿಸಿದ ಹೈಕಮಾಂಡ್

ರಾಜ್ಯ

ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಹುನ್ನಾರಕ್ಕೆ ಯಾವುದೇ ಸಂದರ್ಭದಲ್ಲಿ ಶಥಾಯಗಥಾಯ ಅವಕಾಶ ನೀಡಬಾರದು ಎಂದು ಸೂಚಿಸಿರುವ ಕಾಂಗ್ರೆಸ್‌‍ ಹೈಕಮಾಂಡ್‌ ಸಚಿವ ಸಂಪುಟದ ವಿಸ್ತರಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ರಾಜ್ಯ ನಾಯಕರಿಗೆ ಮಹತ್ವದ ಸಂದೇಶ ರವಾನಿಸಿದೆ. ಮುಡಾ ಪ್ರಕರಣದಲ್ಲಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಿನ್ನೆ ಸುದೀರ್ಘ ಚರ್ಚೆ ನಡೆಸಿದ್ದು, ಯಾವುದೇ ಅನಿರೀಕ್ಷಿತ ಬೆಳವಣಿಗೆಗಳು ಘಟಿಸಿದರೂ ಅದಕ್ಕೆ ಮಾನಸಿಕವಾಗಿ ಸಿದ್ಧವಾಗಿರುವಂತೆ ಇಬ್ಬರು ನಾಯಕರಿಗೆ ಹೈಕಮಾಂಡ್‌ ಸೂಚನೆ ನೀಡಿದೆ.

ಮುಡಾ ಪ್ರಕರಣದಲ್ಲಿ ಇಡೀ ಕಾಂಗ್ರೆಸ್ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಲ್ಲಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಸಚಿವ ಸಂಪುಟ ಶಾಸಕಾಂಗ ಸಭೆಯಲ್ಲೂ ಈ ಬಗ್ಗೆ ನಿರ್ಣಯಗಳಾಗಿವೆ. ಹೈಕಮಾಂಡ್‌ ಕೂಡ ಮುಖ್ಯಮಂತ್ರಿಯವರ ಜೊತೆಗಿರಲಿದೆ. ಒಂದು ವೇಳೆ ಕಾನೂನು ಸಮರದಲ್ಲಿ ಹಿನ್ನಡೆಯಾಗಿ ಎಫ್‌ಐಆರ್‌ ದಾಖಲಾಗಿದ್ದೇ ಆದರೆ ಆ ವೇಳೆ ಉದ್ಭವಿಸಬಹುದಾದ ಪರಿಸ್ಥಿತಿಗಳಿಗೆ ಪೂರ್ವ ತಯಾರಿಯಾಗಿರಬೇಕು ಎಂದು ಸೂಚಿಸಿರುವುದಾಗಿ ತಿಳಿದುಬಂದಿದೆ.

ಮತ್ತೊಂದೆಡೆ ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಇದೇ ವೇಳೆ ಪ್ರಾಥಮಿಕ ಚರ್ಚೆಗಳು ನಡೆದಿವೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಸಂಘಟಿಸಲು ಅವಕಾಶ ನೀಡುವ ಅಗತ್ಯವಿದೆ. ಹೀಗಾಗಿ ಸಂಪುಟದಲ್ಲಿರುವ ಐದಾರು ಮಂದಿ ಸಚಿವರನ್ನು ಕೈಬಿಟ್ಟು ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳಬೇಕು.

ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿ.ಕೆ.ಶಿವಕುಮಾರ್‌ರನ್ನು ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಲಾಗಿದೆ.ಇದಕ್ಕೆ ಡಿ.ಕೆ.ಶಿವಕುಮಾರ್‌ ಕೂಡ ಸಹಮತ ವ್ಯಕ್ತಪಡಿಸಿದ್ದು, ನಗರ ಹಾಗೂ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಳಿಕ ಅಧ್ಯಕ್ಷರನ್ನು ಬವಲಾವಣೆ ಮಾಡಬಹುದು ಎಂದು ಚರ್ಚೆಯಾಗಿದೆ.

ಸಚಿವ ಸಂಪುಟ ವಿಸ್ತರಣೆ, ಅಧ್ಯಕ್ಷರ ಬದಲಾವಣೆ ಇವೆಲ್ಲವೂಗಳ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯ ಕೇಳಿಬಂದಿದೆ. ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬಳಿಕ ಈ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೈಕಮಾಂಡ್‌ ನಾಯಕರು ಭರವಸೆ ನೀಡಿದ್ದಾರೆ.