ಸಾರ್ವಜನಿಕರು ಮತ್ತು ಪಂಚಾಯಿತಿ ಅಧಿಕಾರಿಗಳ ನಡುವೆ ಸಂಘರ್ಷ.!
ಗ್ರಾಮೀಣ ಪ್ರದೇಶದ ಆಸ್ತಿ ಮಾರಾಟ, ಖರೀದಿ, ಬ್ಯಾಂಕ್ ಸಾಲ, ವಿದ್ಯುತ್ ಸಂಪರ್ಕ, ಖಾತೆ ಬದಲಾವಣೆ ಮತ್ತಿತರ ಕಾರ್ಯಗಳು ಬಹುತೇಕ ಸ್ಥಗಿತಗೊಂಡಿವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇ-ಸ್ವತ್ತು ನೀಡುವ ವಿಚಾರದಲ್ಲಿ ತಲೆದೋರಿರುವ ತಾಂತ್ರಿಕ ಸಮಸ್ಯೆಯೇ ಇದಕ್ಕೆ ಕಾರಣ. ಸ್ಥಳೀಯ ಮಟ್ಟದಲ್ಲೇ ಆಡಳಿತ ನೀಡುವ ಪರಿಕಲ್ಪನೆಯಡಿ ಅನೇಕ ಸವಲತ್ತುಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀಡಲಾಗುತ್ತದೆ. ಆದರೆ ತಾಂತ್ರಿಕ ಸಮಸ್ಯೆಗಳಿಂದ ಈ ಸೌಲಭ್ಯಗಳು ಜನರ ಕೈಗೆ ಸಕಾಲದಲ್ಲಿ ಸಿಗುತ್ತಿಲ್ಲ.
ರೈತರು, ಸಾರ್ವಜನಿಕರು ದಾಖಲೆಗಳಿಗಾಗಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಈ ಹಿಂದೆ ಇದ್ದ ಇ-ಸ್ವತ್ತು ತಂತ್ರಾಂಶವನ್ನು 4.8 ಅವತರಣಿಕೆ ಮೇಲ್ದರ್ಜೆಗೇರಿಸಿ ನಮೂನೆ 11ಎ ಮತ್ತು 11ಬಿ ವಿತರಣೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿರುವುದು ಅವಾಂತರ ಸೃಷ್ಟಿಸಿದೆ. ಈ ತಂತ್ರಾಂಶ ಬಳಕೆದಾರಸ್ನೇಹಿ ಆಗಿಲ್ಲದ ಕಾರಣ ಪದೇಪದೆ ತಾಂತ್ರಿಕ ದೋಷ ಎದುರಾಗಿ ಜನರಿಗೆ ಸೌಲಭ್ಯ ಕಲ್ಪಿಸುವಲ್ಲಿ ಅಡ್ಡಿಯಾಗಿದೆ.
ರಾಜ್ಯದ ಎಲ್ಲಾ ಗ್ರಾಪಂಗಳಲ್ಲಿ ಸರ್ಕಾರದ ನಿರ್ದೇಶನದಂತೆ ನಮೂನೆ 9/11ಎ, 11 ಬಿ ವಿತರಿಸಿ ನಿವೇಶನ ತೆರಿಗೆ, ಕಟ್ಟಡಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಗ್ರಾಮ ಪಂಚಾಯಿತಿಗಳಲ್ಲಿ ನಿತ್ಯ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಒಂದು ತಿಂಗಳಿಂದ ಸೇವೆ ಒದಗಿಸಲು ಆಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ಮತ್ತು ಪಂಚಾಯಿತಿ ಅಧಿಕಾರಿಗಳ ನಡುವೆ ಸಂಘರ್ಷ ಏರ್ಪಡುತ್ತಿದೆ. ಇ-ಸ್ವತ್ತು ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಸಾಕಷ್ಟು ಬಾರಿ ಸಂಬಂಧಪಟ್ಟವರಲ್ಲಿ ಮನವಿ ಮಾಡಿಕೊಂಡರೂ ಸಮಸ್ಯೆ ಬಗೆಹರಿದಿಲ್ಲ ಎಂದು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ದೂರುತ್ತಾರೆ.