ಇಂಥವರು ಮಾಡುವ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಯಾವುದೇ ಹುರುಳಿಲ್ಲ; ಮಾಧ್ಯಮಗಳು ತಮ್ಮ ಕರ್ತವ್ಯವನ್ನು ಮರೆಯಬಾರದು. ಪುರುಷರು ಕೂಡ ಮನುಷ್ಯರೇ.
ಕೇರಳದಲ್ಲಿ ಹೇಮಾ ಸಮಿತಿಯ ವರದಿ ಬಿಡುಗಡೆಯಾದ ಬೆನ್ನಲ್ಲೇ ಮಲಯಾಳಂ ಚಿತ್ರರಂಗದ ಕರಾಳ ಮುಖ ಒಂದೊಂದಾಗಿ ಕಳಚಿಕೊಳ್ಳತ್ತಿದೆ. ಅನೇಕ ನಟಿಯರು ತಾವು ಎದುರಿಸಿದ ಕಹಿ ಘಟನೆಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುತ್ತಿದ್ದು, ಆರೋಪ-ಪ್ರತ್ಯಾರೋಪಗಳ ಸರಣಿ ಮುಂದುವರಿದಿದೆ. ಇತ್ತೀಚೆಗಷ್ಟೇ ನಟಿ ರೇವತಿ ಸಂಪತ, ನಟ ಸಿದ್ದಿಖ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದೀಗ ರೇವತಿ ಆರೋಪಕ್ಕೆ ಮಲಯಾಳಂ ಬಿಗ್ಬಾಸ್ ವಿಜೇತ ಅಖಿಲ್ ಮರಾರ್ ತಿರುಗೇಟು ನೀಡಿದ್ದಾರೆ.
ಇಂತಹ ಆರೋಪಗಳಿಗೆ ಗುರಿಯಾಗುವ ಪುರುಷನಿಗೂ ಒಂದು ಕುಟುಂಬ ಮತ್ತು ಜೀವನವಿದೆ ಎಂಬುದನ್ನು ಕೆಲವರು ಅರ್ಥಮಾಡಿಕೊಳ್ಳಬೇಕು. ರೇವತಿ ಸಂಪತ್, ನಟ ಸಿದ್ದಿಕ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ತಿಳಿಯಲು ನಾನು ನಟ ಶಿಜು ಅವರಿಗೆ ಕರೆ ಮಾಡಿದೆ. ನಾನು ಅವರನ್ನು ಏಕೆ ಸಂಪರ್ಕಿಸಿದೆ ಎಂದು ನಿಮಗೆ ತಿಳಿದಿದೆ. 2021ರಲ್ಲೇ ಇದೇ ರೇವತಿ ಸಂಪತ್, ಶಿಜು ವಿರುದ್ಧ ಆರೋಪಗಳನ್ನು ಮಾಡಿದ್ದರು. ಈ ಎಲ್ಲದರ ಹಿಂದಿನ ಸತ್ಯವನ್ನು ನಾನು ತಿಳಿದುಕೊಳ್ಳಲು ಬಯಸುತ್ತೇನೆ.
ಮಾಧ್ಯಮಗಳು ಇಂತಹ ಸುದ್ದಿಗಳನ್ನು ಹೊರ ತಂದಾಗ ಕೇರಳದ 99% ಜನರು ಮಹಿಳೆಯ ಮೇಲೆ ಪುರುಷನಿಂದಲೇ ಲೈಂಗಿಕ ದೌರ್ಜನ್ಯ ಆಗಿದೆ ಎಂದು ನಂಬುತ್ತಾರೆ. ಇಂತಹ ಕೆಟ್ಟ ಹೆಡ್ಲೈನ್ಗಳನ್ನು ಹಾಕಿ, ಜೀವನವನ್ನು ಹಾಳುಮಾಡುವ ಬದಲು ವಾಸ್ತವವನ್ನು ಅರಿತು ವರದಿ ಮಾಡಬೇಕೆಂದು ಮಾಧ್ಯಮಗಳಲ್ಲಿ ನಾನು ವಿನಂತಿಸಿಕೊಳ್ಳುತ್ತೇನೆ. 2021ರಲ್ಲಿ ರೇವತಿ ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ 14 ಜನರ ಹೆಸರನ್ನು ಪಟ್ಟಿ ಮಾಡಿದ್ದಳು. ಇದಾದ ಬಳಿಕ ಮೂರು ದಿನಗಳವರೆಗೆ ಆಕೆ ಯಾರ ಬಗ್ಗೆಯೂ ಈ ವಿಷಯದ ಬಗ್ಗೆ ಮಾತನಾಡಲಿಲ್ಲ. ಸುಮ್ಮನೇ ಆರೋಪ ಮಾಡಿ ಸುಮ್ಮನಾದಳು. ಆದರೆ, ಆ ಮೂರು ದಿನಗಳಲ್ಲಿ ಅನೇಕ ಘಟನೆಗಳು ಸಂಭವಿಸಿದವು. 14 ಮಂದಿಯಲ್ಲಿ ಒಬ್ಬರ ಪತ್ನಿ ಆತ್ಮಹತ್ಯೆಗೆ ಯತ್ನಿಸಿದರು. ಶಿಜು ಕೂಡ ತನ್ನ ಕುಟುಂಬದೊಳಗೆ ಹಿಂಸೆಯ ದಿನಗಳನ್ನು ಅನುಭವಿಸಬೇಕಾಯಿತು. ಮೂರು ದಿನಗಳ ನಂತರ ಆಕೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದಳು. ಆದರೆ, ಅಷ್ಟರಲ್ಲಾಗಲೇ ಕೆಲವರಿಗೆ ಹಾನಿಯಾಗಿತ್ತು.
ಮಾಧ್ಯಮಗಳು ಆರೋಪಗಳ ಬಗ್ಗೆ ಮೊದಲು ಸತ್ಯಾಸತ್ಯತೆಗಳನ್ನು ಪರಿಶೀಲಿಸಬೇಕು. ಕನಿಷ್ಠಪಕ್ಷ ಎರಡೂ ಕಡೆ ಏನು ನಡೆದಿದೆ ಎಂಬುದನ್ನು ಜನರಿಗೆ ತಿಳಿಸುವ ನೈತಿಕತೆಯನ್ನು ಹೊಂದಿರಬೇಕು. ಈ ರೇವತಿ ಸಂಪತ್ ಚೀನಾದಲ್ಲಿ ಎಂಬಿಬಿಎಸ್ ಓದುತ್ತಿದ್ದಾಗ ತನ್ನ ಸಹಪಾಠಿಯ ನಗ್ನ ವಿಡಿಯೋ ಚಿತ್ರೀಕರಿಸಿದ್ದಕ್ಕಾಗಿ ಕಾಲೇಜಿನಿಂದ ಹೊರಹಾಕಲಾಯಿತು. ಇಂಥವರು ಮಾಡುವ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಅಖಿಲ್ ತಿಳಿಸಿದ್ದಾರೆ.
ಕಾನೂನು ತನ್ನ ದಾರಿ ಹಿಡಿಯಲಿ. ದೂರನ್ನು ಸ್ವೀಕರಿಸಲು ಸರಕಾರವೂ ಸಿದ್ಧವಾಗಬೇಕು ಮತ್ತು ಮಾಧ್ಯಮಗಳು ತಮ್ಮ ಕರ್ತವ್ಯವನ್ನು ಮರೆಯಬಾರದು. ಪುರುಷರು ಕೂಡ ಮನುಷ್ಯರೇ ಅಲ್ಲವೇ ಎಂದು ಅಖಿಲ್ ಹೇಳಿದ್ದಾರೆ.
ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಲಾಯಿತು.