ಬಂಧಿತರ ಸಂಖ್ಯೆ 13 ಕ್ಕೆ ಏರಿಕೆ.. ಇನ್ನು ಮೂವರ ಬಂಧನ ಬಾಕಿಯಿದೆ
ಜೂನ್ 21 ರಂದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಉಳಾಯಿಬೆಟ್ಟುವಿನಲ್ಲಿ ನಡೆದ ಕಾಂಗ್ರೆಸ್ ಮುಖಂಡ, ಪಿಡಬ್ಲ್ಯುಡಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್‌ರ ಮನೆಗೆ ರಾತ್ರಿ 8 ಗಂಟೆಯ ಸುಮಾರಿಗೆ ಮುಸುಕುಧಾರಿಗಳು ಮನೆಗೆ ನುಗ್ಗಿ ಮನೆ ಮಂದಿಗೆ ಹಲ್ಲೆ ನಡೆಸಿ ನಗದು, ಚಿನ್ನ ದೋಚಿ ಪರಾರಿಯಾದ ಘಟನೆಗೆ ಸಂಬಂಧಿಸಿ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಇದರೊಂದಿಗೆ ಬಂಧಿತರ ಸಂಖ್ಯೆ 13ಕ್ಕೇರಿದೆ.
ಕೇರಳ ತ್ರಿಶೂರ್ ನಿವಾಸಿಗಳಾದ ಡೆವಿನ್, ಗಾಡ್ವಿನ್, ಅಮಲ್ ಕೃಷ್ಣ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಉಪ್ಪಳ ಬಾಲಕೃಷ್ಣ ಶೆಟ್ಟಿ, ಪೆರುವಾಯಿಯ ರೇಮಂಡ್ ಡಿಸೋಜ, ನೀರುಮಾರ್ಗದ ರಮೇಶ್, ವಸಂತ್ ಕುಮಾರ್, ತಿರುವನಂತಪುರದ ಜಾನ್‌ಬಾಸ್ಕೋ, ತ್ರಿಶೂರ್‌ನ ಶಿಜೋ ದೇವಸಿ, ಸತೀಶ್ ಬಾಬು, ಶಾಕೀರ್ ಹುಸೇನ್, ಸಜೀಶ್ ಎಂ., ವಿನೋಜ್ ಪಿ.ಕೆ. ಹಾಗೂ ಕಾರು ಚಾಲಕ ಬಿಪಿನ್‌ರಾಜ್ ಎಂಬವರನ್ನು ಈ ಹಿಂದೆ ಬಂಧಿಸಲಾಗಿತ್ತು. 13 ಮಂದಿ ಆರೋಪಿಗಳ ಪೈಕಿ ಮೂವರು ದ.ಕ. ಜಿಲ್ಲೆಯವರಾಗಿದ್ದರೆ ಉಳಿದ 10 ಮಂದಿ ಕೇರಳದವರು. ಅದರಲ್ಲಿ ರಮೇಶ್, ವಸಂತ್ ಪದ್ಮನಾಭ ಕೋಟ್ಯಾನ್ ರ ಪರಿಚಿತರೇ ಆಗಿದ್ದರು.
ಇತ್ತೀಚೆಗೆ ದ.ಕ ಜಿಲ್ಲಾ ಮೂರ್ತೆದಾರರ ಮಹಾಮಂಡಲ ಪದಾಧಿಕಾರಿಗಳು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಪ್ರಮುಖ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಈ ಹಿಂದೆ ಕೆಲವು ಆರೋಪಿಗಳ ಬಂಧನ ಮಾತ್ರ ನಡೆದಿತ್ತು. ಆದರೆ ಡರೋಡೆಗೈದ ಚಿನ್ನ, ನಗದು ದೊರೆತಿರಲಿಲ್ಲ. ಆದರೆ ಇದೀಗ ಬಂಧಿತ ಆರೋಪಿಗಳಿಂದ ಚಿನ್ನಾಭರಣ, ನಗದು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೂ ಮೂವರ ಬಂಧನವಾಗಲು ಬಾಕಿಯಿದೆ. ಅವರಿಂದಲೂ ಸೊತ್ತು, ನಗದು ವಶಪಡಿಸಲು ಬಾಕಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.