ರಾಜ್ಯಪಾಲರ ಮನೆಗೆ ನುಗ್ಗಿ ಬೇಕಾದೀತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ, ಎಂ.ಎಲ್.ಸಿ.ಐವನ್ ಡಿಸೋಜಾ ಮನೆಗೆ ತಡರಾತ್ರಿ ಕಲ್ಲುತೂರಾಟ ನಡೆಸಿ ಹಾನಿಗೊಳಿಸಿದ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಟ್ಲ ಠಾಣಾ ವ್ಯಾಪ್ತಿಯ ಬೋಳಂತೂರು ನಾರಾಯಣ ಕೋಡಿ ನಿವಾಸಿ ರಾಘವ ಭಂಡಾರಿ ಪುತ್ರ ಭರತ್ ಯಾನೆ ರಕ್ಷಿತ್ ಮತ್ತು ಕೊಳ್ನಾಡು ಗ್ರಾಮದ ಕುಡ್ತಮುಗೇರು ಪರ್ತಿಪ್ಪಾಡಿ ನಿವಾಸಿ ಆನಂದ ಪೂಜಾರಿ ಪುತ್ರ ದಿನೇಶ್ ಬಂಧಿತ ಆರೋಪಿಗಳು. ರಾಜ್ಯಪಾಲರ ಮನೆಗೆ ನುಗ್ಗುತ್ತೇವೆಂದು ಐವಾನ್ ನೀಡಿರುವ ಹೇಳಿಕೆಯಿಂದ ಆಕ್ರೋಶಗೊಂಡು ರಾತ್ರಿ ಕಲ್ಲು ಎಸೆದಿದ್ದೇವೆಂದು ವಿಚಾರಣೆ ಸಂದರ್ಭ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಭರತ್ ಮತ್ತು ದಿನೇಶ್ ವಿರುದ್ಧ ಈಗಾಗಲೇ ಹಲ್ಲೆ, ಬೆದರಿಕೆ ಆರೋಪದಡಿ ಮೂರು ಪ್ರಕರಣಗಳು ದಾಖಲಾಗಿವೆ. ಇವರಿಬ್ಬರೂ ಬಜರಂಗದಳ ಸಂಘಟನೆಯ ಸಕ್ರಿಯ ಕಾರ್ಯಕರ್ತರೆಂದು ತಿಳಿದು ಬಂದಿದೆ.