ವಿರೋಧಿಗಳ ಸೈಲೆಂಟ್ ಗೇಮ್ ಗೆ ಬಲಿಯಾದ್ರ ಪುತ್ತಿಲ.
ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ ದೊಡ್ಡ ಇಮೇಜ್, ಶಕ್ತಿ ಇರುವುದು ಪುತ್ತೂರಿನಲ್ಲಿ. ಕಾರ್ಯಕರ್ತರ ದೊಡ್ಡ ದಂಡೇ ಇದೆ. ಅಂತಹ ಪುತ್ತೂರಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಕಾಡೆ ಮಲಗಿತ್ತು. ಕಾಂಗ್ರೆಸ್ ವಿಜಯ ದುಂದುಭಿ ಬಾರಿಸಿತ್ತು. ಅದಕ್ಕೆಲ್ಲ ಕಾರಣವಾಗಿದ್ದು ಒಂದೇ ಒಂದು ಹೆಸರು. ಡೈನಾಮಿಕ್ ಇಮೇಜಿನ ಅರುಣ್ ಕುಮಾರ್ ಪುತ್ತಿಲ.
ಒಂದು ಕಾರು ಅಲುಗಾಟದಿಂದ ರಾಜ್ಯಾಧ್ಯಕ್ಷ, ಸಂಸದ ಸ್ಥಾನವೂ ಹೊರಟು ಹೋಗಿತ್ತು. ಪುತ್ತಿಲ ಪರಿವಾರದ ಕಾರ್ಯಕರ್ತರ ಹವಾ ಆ ರೀತಿ ಇತ್ತು. ಬೆರಳೆಣಿಕೆಯ ಓಟಿನಿಂದ ಎಂಎಲ್ಎ ಆಗುವ ಚಾನ್ಸ್ ತಪ್ಪಿತ್ತು. ಬಿಜೆಪಿಗೆ ಮರ್ಮಾಘಾತ ನೀಡುವಲ್ಲಿ ಸಫಲರಾಗಿದ್ದರು. ಪುತ್ತಿಲ ಇಲ್ಲದಿದ್ದರೆ ಪುತ್ತೂರು ಬಿಜೆಪಿ ಇಲ್ಲ ಅನ್ನುವ ಸಂದೇಶ ರವಾನಿಸುವಲ್ಲಿ ಯಶಸ್ವಿಯಾದರು. ಕೊನೆಗೆ ಬಿಜೆಪಿ ಸೇರಿ ಬಿಟ್ಟರು.
ಪುತ್ತಿಲ ಬಿಜೆಪಿ ಸೇರಿದೊಡನೆ ರಾಜಕೀಯವಾಗಿ ಪುತ್ತಿಲರನ್ನು ಮುಗಿಸುವಲ್ಲಿ ಬಿಜೆಪಿಯೊಳಗಿನ ಕೆಲ ನಾಯಕರು ಸೈಲೆಂಟ್ ಗೇಮ್ ಆಟ ಆಡಿದರು. ಅದೀಗ ಯಶಸ್ವಿಯಾಗಿದೆ. ಪುತ್ತಿಲ ಹವಾ ಠುಸ್ಸಾಗುತ್ತಿದೆ.
ಇತ್ತೀಚೆಗೆ ಹೊರಬಂದ ಪುತ್ತಿಲ ಹಾಗೂ ಸ್ನೇಹಿತೆಯ ಆಡಿಯೋ ರಾಜಕಾರಣದಲ್ಲಿ ಧೂಳೆಬ್ಬಿಸಿದೆ. ರಾಜಕೀಯ ಅಂದರೆ ನಾಚಿಕೆ, ಮಾನ ಮರ್ಯಾದೆ ಇಲ್ಲದವರಿಗೆ ಅನ್ನುವ ಅವರ ಹೇಳಿಕೆಯೇ ಅವರ ಸೈದ್ಧಾಂತಿಕ ಅವಸಾನವನ್ನು ತೋರಿಸುತ್ತಿದೆ. 3.5 ಕೋಟಿ ಡೀಲ್ ನಡೆದು ಪುತ್ತಿಲ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿಯನ್ನು ಸೋಲಿಸಿರುವ ಹೊಸ ಬಾಂಬ್ ಹೊರಬಿದ್ದಿದೆ. ಇವ್ಯಾವುದಕ್ಕೂ ಪುತ್ತಿಲ ರಿಯಾಕ್ಟ್ ನೀಡದೆ ಮೌನವಾಗಿದ್ದಾರೆ.
ಪುತ್ತೂರು ರಾಜಕಾರಣದಲ್ಲಿ ಪುತ್ತಿಲರನ್ನು ಸೈಡ್ ಲೈನಿಗೆ ತರುವ ಕೆಲಸ ನಡೆಯುತ್ತಿರುವ ಹೊತ್ತಿಗೆ ಮಠಂದೂರು ಶಿಷ್ಯ ಸಂಘ, ಶಾಖೆ ಬಿಟ್ಟು ಫುಲ್ ಟೈಮ್ ರಾಜಕಾರಣಕ್ಕೆ ಇಳಿದಿರುವುದು, ಮುಂದಿನ ಬಿಜೆಪಿ ಅಭ್ಯರ್ಥಿ ಅನ್ನುವ ನೆಲೆಯಲ್ಲಿ ಪ್ರಾಜೆಕ್ಟ್ ಆಗುತ್ತಿದ್ದಾರೆ. ಇದೆಲ್ಲ ಪುತ್ತಿಲ ವಿರೋಧಿಗಳು ನಡೆಸಿರುವ ಸೈಲೆಂಟ್ ಗೇಮ್ ಆಗಿದ್ದು, ಒಟ್ಟಾರೆ ಪುತ್ತಿಲ ಪರಿವಾರ ಬಿಜೆಪಿ ಗೆ ಬಂದು ಕೆಟ್ಟರಾ ಅನ್ನುವ ಮಾತುಗಳು ಹರಿದಾಡುತ್ತಿದೆ.
ಮಾಜಿ ಶಾಸಕ ಮಠಂದೂರು ಶಿಷ್ಯ, ಸಂಘಪರಿವಾರದಲ್ಲಿ 28 ವರ್ಷಗಳಿಂದ ಜವಾಬ್ದಾರಿ ವಹಿಸಿ ಕೆಲಸ ಮಾಡುತ್ತಿದ್ದ ಮುರಳಿ ಕೃಷ್ಣ ಹಂಸತಡ್ಕ ರನ್ನು ಸಂಘಟನೆಯಿಂದ ಬಿಡುಗಡೆಗೊಳಿಸಿ ಪೂರ್ಣ ಪ್ರಮಾಣದಲ್ಲಿ ರಾಜಕಾರಣಕ್ಕೆ ಇಳಿಯುವಂತೆ ವಿಶ್ವ ಹಿಂದೂ ಪರಿಷತ್ ಸೂಚಿಸಿದೆ. ಬಜರಂಗದಳದಲ್ಲಿ ವಿವಿಧ ಜವಾಬ್ದಾರಿ ವಹಿಸಿ ತನ್ನದೇ ಆದ ಇಮೇಜ್ ಹೊಂದಿರುವ ಹಂಸತಡ್ಕ ರಾಜಕಾರಣಕ್ಕೆ ಇಳಿಯುತ್ತಿರುವುದು ಪುತ್ತಿಲ ಪರಿವಾರಕ್ಕೆ ಡವ ಡವ ಉಂಟಾಗಿದೆ. ಪರಿವಾರ ಸಂಘಟನೆ ಒಂದು ತೀರ್ಮಾನ ತೆಗೆದುಕೊಂಡರೆ ಅದರ ಹಿಂದೆ ದೂರದೃಷ್ಟಿ ಇರುತ್ತದೆ ಅನ್ನುವುದು ಪುತ್ತಿಲ ಪರಿವಾರಕ್ಕೆ ತಿಳಿಯದ ವಿಷಯವೇನಲ್ಲ. ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಮುರಳಿ ಕೃಷ್ಣ ಹಂಸತಡ್ಕ ಬಿಜೆಪಿ ಎಂಎಲ್ಎ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.
ಹಂಸತಡ್ಕ ಮಠಂದೂರು ಗರಡಿಯಲ್ಲಿ ಪಳಗಿದವರು. ಮಠಂದೂರು ಶಾಸಕರಾಗಿದ್ದ ಅವಧಿಯಲ್ಲಿ ಕಾಮಗಾರಿಯ ಎಲ್ಲಾ ಗುತ್ತಿಗೆ ಹಂಸತಡ್ಕ ಅವರದ್ದಾಗಿತ್ತು. ಮಠಂದೂರು ಎರಡನೇ ಬಾರಿ ಟಿಕೆಟ್ ಗೆ ಅಡ್ಡಗಾಲು ಹಾಕಿದ್ದು ಪುತ್ತಿಲ. ಇಬ್ಬರ ಜಗಳದಲ್ಲಿ ಡಮ್ಮಿ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿತ್ತು. ಇದೀಗ ಮಠಂದೂರು ಸೈಡ್ ಲೈನಿಗೆ ತಳ್ಳಿದ್ದಾರೆ. ತಮ್ಮ ಶಿಷ್ಯನ ಮೂಲಕ ಖದರ್ರು ತೋರಿಸಲು ಆರಂಭಿಸಿದ್ದಾರೆ. ಈ ಗುದ್ದಿಗೆ ವಿಲವಿಲ ಒಡ್ಡಾಡುವ ಪರಿಸ್ಥಿತಿ ಪುತ್ತಿಲರದ್ದಾಗಿದೆ.