ತನ್ನ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಕೇಂದ್ರ ಲೋಕಸೇವಾ ಆಯೋಗ ಯಾವುದೇ ಅಧಿಕಾರವಿಲ್ಲ: ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್​

ರಾಷ್ಟ್ರೀಯ

ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಅನರ್ಹಗೊಂಡಿರುವ ವಿವಾದಿತ ಟ್ರೈನಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್​ ಪ್ರಕರಣ ರಾಷ್ಟ್ರವ್ಯಾಪಿ ಸಖತ್​ ಸದ್ದು ಮಾಡಿತ್ತು. ಇದೀಗ ತನ್ನ ಅನರ್ಹತೆಗೆ ಸವಾಲೆಸೆದಿದ್ದು, ಕೇಂದ್ರ ಲೋಕಸೇವಾ ಆಯೋಗಕ್ಕೆ (UPSC) ತನ್ನ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಯಾವುದೇ ಅಧಿಕಾರವಿಲ್ಲವೆಂದು ಹೇಳಿದ್ದಾರೆ. ತನ್ನ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್​ಗೆ ಪೂಜಾ ಉತ್ತರ ನೀಡಿದ್ದು, ತನ್ನನ್ನು ಅನರ್ಹಗೊಳಿಸುವ ಯಾವುದೇ ಅಧಿಕಾರ ಯುಪಿಎಸ್​ಸಿಗೆ ಇಲ್ಲ ಎಂದು ಹೇಳಿದ್ದಾರೆ.

ಒಮ್ಮೆ ಪ್ರೊಬೇಷನರ್ ಆಗಿ ಆಯ್ಕೆಯಾದ ನಂತರ ಯುಪಿಎಸ್‌ಸಿಗೆ ಅವರ ಅಭ್ಯರ್ಥಿಯನ್ನು ಅನರ್ಹಗೊಳಿಸುವ ಯಾವುದೇ ಹಕ್ಕಿಲ್ಲ. ಯುಪಿಎಸ್‌ಸಿಯಲ್ಲಿ ನಾನು ಯಾವುದೇ ತಪ್ಪು ಮಾಹಿತಿ ನೀಡಿಲ್ಲ. ಒಂದು ವೇಳೆ ಹಾಗೆ ಮಾಡಿದ್ದಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DOPT) ಮಾತ್ರ ಅಖಿಲ ಭಾರತ ಸೇವಾ ಕಾಯಿದೆ, 1954 ಮತ್ತು CSE 2022 ನಿಯಮಗಳ ನಿಯಮ 19 ರ ಪ್ರಕಾರ ನಮ್ಮ ವಿರುದ್ಧ ಕ್ರಮ ಜರುಗಿಸಬಹುದಾಗಿದೆ ಎಂದು ದೆಹಲಿ ಹೈಕೋರ್ಟ್​ಗೆ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ.

ಮಾಜಿ ಐಎಎಸ್ ಪ್ರೊಬೇಷನರ್‌ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್‌ನಲ್ಲಿ ಯುಪಿಎಸ್‌ಸಿ ವಿರೋಧಿಸಿತ್ತು. ಲೋಕಸೇವಾ ಆಯೋಗ ಮತ್ತು ಸಾರ್ವಜನಿಕರ ವಿರುದ್ಧ ಅವರು ವಂಚನೆ ಎಸಗಿದ್ದಾರೆ ಎಂದು ಆರೋಪಿಸಿದೆ. ಈ ಪ್ರಕರಣವು ಸಾರ್ವಜನಿಕ ನಂಬಿಕೆ ಮತ್ತು ನಾಗರಿಕ ಸೇವೆಗಳ ಪರೀಕ್ಷೆಯ ಸಮಗ್ರತೆಯ ಮೇಲೆ ವ್ಯಾಪಕ ಪರಿಣಾಮಗಳನ್ನು ಬೀರುತ್ತದೆ ಎಂಬ ಕಾರಣಕ್ಕಾಗಿ ದೆಹಲಿ ಪೊಲೀಸರು ಬಂಧನ ಪೂರ್ವ ಜಾಮೀನು ಅರ್ಜಿಯನ್ನು ವಜಾಗೊಳಿಸುವಂತೆ ಕೋರಿದರು.

ಮೀಸಲಾತಿ ಪ್ರಯೋಜನಗಳನ್ನು ಪಡೆಯಲು UPSC ನಾಗರಿಕ ಸೇವಾ ಪರೀಕ್ಷೆ-2022ರ ತನ್ನ ಅರ್ಜಿಯಲ್ಲಿ ಪೂಜಾ ಖೇಡ್ಕರ್ ಮಾಹಿತಿಯನ್ನು ತಪ್ಪಾಗಿ ನಿರೂಪಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಜುಲೈ 31ರಂದು UPSC ಪೂಜಾ ಖೇಡ್ಕರ್ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಿತ್ತು ಮತ್ತು ಮುಂದಿನ ಪರೀಕ್ಷೆಗಳಿಂದ ಅವರಿಗೆ ಪ್ರವೇಶ ನೀಡದಿರಲು ನಿರ್ಧಾರ ಮಾಡಿತ್ತು. ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಅಂಗವಿಕಲರ ಹಕ್ಕು ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಆಕೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.