ಏಕ ನಿವೇಶನಕ್ಕೆ ಅನುಮೋದನೆ ನೀಡುವಾಗ ರಸ್ತೆಗೆ ಜಮೀನು ಬೇಕಿದ್ದರೆ ಪರಿಹಾರ ನೀಡಿಯೇ ಸ್ವಾಧೀನ ಮಾಡಿ ಎಂದು ಹೈಕೋರ್ಟ್ ಸರ್ಕಾರಕ್ಕೆ ಖಡಕ್ ತಾಕೀತು ಮಾಡಿದೆ. ಏಕ ನಿವೇಶನವನ್ನು ಮಂಜೂರು ಮಾಡುವಾಗ ನಗರಾಭಿವೃದ್ಧಿ ಪ್ರಾಧಿಕಾರ ಅಥವಾ ಇಲಾಖೆಗಳು ರಸ್ತೆ ವಿಸ್ತರಣೆಗೆ ಉಚಿತವಾಗಿ ಜಮೀನು ಕೊಡಬೇಕು ಎಂದು ಆದೇಶ ನೀಡುವುದು ಸಮರ್ಪಕವಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಅಶೋಕ ಎಸ್. ಕಿಣಗಿ ಅವರಿದ್ದ ಏಕಸದಸ್ಯ ಪೀಠದಿಂದ ತೀರ್ಪು ನೀಡಲಾಗಿದೆ.
ರಸ್ತೆ ವಿಸ್ತರಣೆಗಾಗಿ ನಿಗದಿಪಡಿಸಲಾದ ಜಮೀನನ್ನು ಸೂಕ್ತ ಪರಿಹಾರ ನೀಡಿ ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ನಗರ ಯೋಜನೆ ಮತ್ತು ನಗರಾಭಿವೃದ್ಧಿ ಸಚಿವಾಲಯಕ್ಕೆ ನ್ಯಾಯಪೀಠ ನಿರ್ದೇಶನ ನೀಡಿದೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ನಿವಾಸಿ ಅರ್ಜಿದಾರ ಅಜಿತ್ ಕುಮಾರ್ ಶೆಟ್ಟಿ ಮತ್ತು ಅವರ ಪುತ್ರ ಕಾಮರಾಜ್ ಶೆಟ್ಟಿ ಅವರು ಉಡುಪಿ ಜಿಲ್ಲಾಧಿಕಾರಿ, ಉಡುಪಿ ನಗರ ಯೋಜನೆ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದು, ರಸ್ತೆ ವಿಸ್ತರಣೆಗೆ ಜಮೀನು ಪಡೆದುಕೊಳ್ಳುವ ಬಗ್ಗೆ ಹೊರಡಿಸಿದ ಆದೇಶದ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದರು.
ಡಾ. ಅರುಣ್ ಕುಮಾರ್ ಬಿ.ಸಿ. v/s ಕರ್ನಾಟಕ ಸರ್ಕಾರ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಏಕಪಕ್ಷೀವಾಗಿ ಜಮೀನಿನ ಹಕ್ಕನ್ನು ಕಸಿದುಕೊಳ್ಳುವುದು ಸಂವಿಧಾನದ ಅಡಿ ಸಮ್ಮತವಲ್ಲ. ರಸ್ತೆ ವಿಸ್ತರಣೆ ಆಗಬೇಕಿದ್ದರೆ ಅದಕ್ಕೆ ಸರ್ಕಾರ ಸೂಕ್ತ ಪ್ರಕ್ರಿಯೆ ನಡೆಸಿ ಪರಿಹಾರ ನೀಡಿದ ನಂತರವೇ ಜಮೀನು ಪಡೆದುಕೊಳ್ಳಬೇಕು ಎಂದು ತಾಕೀತು ಮಾಡಲಾಗಿದೆ.