ಬಿಜೆಪಿ ಅವಧಿಯಲ್ಲಿ ಕೊರೋನಾ ಹೆಸರಿನಲ್ಲಿ ಸಾವಿರಾರು ಕೋಟಿ ಅಕ್ರಮ; ‘ದಾಖಲೆ’ ಸಮೇತ ಮಧ್ಯಂತರ ವರದಿ ಸಲ್ಲಿಕೆ

ರಾಜ್ಯ

ಬರೋಬ್ಬರಿ 7,223 ಕೋಟಿ ರೂ. ಮೊತ್ತದ ಖರೀದಿಗೆ ನಕಲಿ ಬಿಲ್.!ಬಿಜೆಪಿ ವಿರುದ್ಧದ ಹೋರಾಟಕ್ಕೆ ಬ್ರಹ್ಮಾಸ್ತ್ರ

ಕೊರೋನಾ ಅವಧಿಯಲ್ಲಿ ಆರ್ಥಿಕವಾಗಿ ರಾಜ್ಯ ಸರಕಾರ ಜರ್ಜರಿತವಾಗಿದ್ದರೂ, ಬರೋಬ್ಬರಿ 7,223 ಕೋಟಿ ರೂಪಾಯಿ ಹೆಚ್ಚು ಮೊತ್ತದ ಖರೀದಿಗೆ ನಕಲಿ ಬಿಲ್ ಗಳನ್ನು ಒದಗಿಸಲಾಗಿದೆ ಎನ್ನುವ ಗಂಭೀರ ಆರೋಪ ಇದೀಗ ಕೇಳಿಬಂದಿದೆ. ಬಿಜೆಪಿ ಅವಧಿಯಲ್ಲಿ ಕರೋನಾ ಅವಧಿಯಲ್ಲಿ ಸಾವಿರಾರು ಕೋಟಿ ಅಕ್ರಮ ನಡೆದಿರುವ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರಿಗೆ ಇದೀಗ ಅಕ್ರಮ ನಡೆದಿರುವುದಕ್ಕೆ ‘ದಾಖಲೆ’ ಸಮೇತ ಮಾಹಿತಿ ಸಿಕ್ಕಿರುವುದು ಬಿಜೆಪಿ ವಿರುದ್ಧದ ಹೋರಾಟಕ್ಕೆ ಬ್ರಹ್ಮಾಸ್ತ್ರ ದೊರೆತಿದೆ.

ಕರೋನಾ ಸಮಯದಲ್ಲಿ ನಡೆದಿರುವ ಅವ್ಯವಹಾರದ ತನಿಖೆಗೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ಹಾ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ನೇಮಿಸಿತ್ತು. ಇದೀಗ ಈ ಸಮಿತಿ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಅವ್ಯವಹಾರವಾಗಿರುವ ಸಾಧ್ಯತೆಯಿದೆ ಎಂದು ಉಲ್ಲೇಖಿಸಿದೆ. ಇದರೊಂದಿಗೆ ಏಳು ಸಾವಿರ ಕೋಟಿ ರೂ ಹೆಚ್ಚಿನ ಮೌಲ್ಯದ ವಿವಿಧ ಸಾಮಗ್ರಿಗಳ ಖರೀದಿಗೆ ಸೂಕ್ತ ದಾಖಲೆಗಳೇ ಇಲ್ಲ ಎಂದು ಖಚಿತ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಕುನ್ಹಾ ಅವರು, ಮಧ್ಯಂತರ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಯಾವೆಲ್ಲ ರೀತಿಯಲ್ಲಿ ಅಕ್ರಮ ನಡೆದಿದೆ.? ಹೆಚ್ಚುವರಿ ಮೊತ್ತಕ್ಕೆ ಔಷಧಿ, ವೆಂಟಿಲೇಟರ್, ಮಾಸ್ಕ್ ಸೇರಿದಂತೆ ಹಲವು ವಸ್ತುಗಳ ಖರೀದಿ ವೇಳೆ ಅಕ್ರಮ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.

ಸಲ್ಲಿಕೆಯಾಗಿರುವ ಮಧ್ಯಂತರ ವರದಿಯಲ್ಲಿ, ಸುಮಾರು 7223 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಖರೀದಿಗೆ ಸೂಕ್ತ ದಾಖಲೆಗಳೇ ಇಲ್ಲದಿರುವುದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಧ್ಯಂತರ ವರದಿಯಲ್ಲಿಯೇ ಈ ಪ್ರಮಾಣದ ಅವ್ಯವಹಾರ ನಡೆದಿದೆ ಎಂದಿರುವುದರಿಂದ ಅಂತಿಮ ವರದಿ ವೇಳೆಗೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖವಾಗಿ ಆರೋಗ್ಯ ಇಲಾಖೆ ವತಿಯಿಂದ 1,754 ಕೋಟಿ ರೂ., ರಾಷ್ಟ್ರೀಯ ಆರೋಗ್ಯ ಮಿಷನ್‌ನಿಂದ 1,409 ಕೋಟಿ ರೂ, ವೈದ್ಯಕೀಯ ಶಿಕ್ಷಣ ಇಲಾಖೆಯಿಂದ 618 ಕೋಟಿ ರೂ, ಕರ್ನಾಟಕ ರಾಜ್ಯ ಔಷಧ ಸರಬರಾಜು ಸಂಸ್ಥೆಯಿಂದ 1,364 ಕೋಟಿ ರೂ. ಸೇರಿದಂತೆ ಬಿಬಿಎಂಪಿ ಝೋನ್‌ವಾರು, ಕೆಲ ಸರಕಾರಿ ಆಸ್ಪತ್ರೆಗಳ ವತಿಯಿಂದ ಖರೀದಿಸಿರುವ ನಕಲಿ ಬಿಲ್‌ಗಳನ್ನು ಸೃಷ್ಟಿಸಲಾಗಿದೆ. ಈ ರೀತಿ ನಕಲಿ ಬಿಲ್ ಅಥವಾ ಇನ್ನಿತರೆ ಅಕ್ರಮದ ಮೂಲಕ ನಡೆದಿರುವ ಅಕ್ರಮದ ಪ್ರಮಾಣವೇ ಒಟ್ಟು 7,223 ಸಾವಿರ ಕೋಟಿ ರೂ. ದಾಟಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಖಚಿತ ಮೂಲಗಳು ತಿಳಿಸಿವೆ.

1,722 ಸಾವಿರ ಪುಟದ ವರದಿ
ಇನ್ನು ನ್ಯಾ.ಜಾನ್ ಮೈಕಲ್ ಡಿ ಕುನ್ಹಾ ನೇತೃತ್ವದ ಸಮಿತಿ ಸಲ್ಲಿಸಿರುವ ಮಧ್ಯಂತರ ವರದಿಯೂ 1722 ಪುಟಗಳಿಗೂ ಹೆಚ್ಚು ಪುಟಗಳ ವರದಿಯನ್ನು ಸಲ್ಲಿಕೆ ಮಾಡಲಾಗಿದೆ. ಈ ಪ್ರಮಾಣದಲ್ಲಿ ಸಲ್ಲಿಕೆಯಾಗಿರುವ ವರದಿಯಲ್ಲಿ ಜಿಲ್ಲಾವಾರು, ಝೋನ್‌ವಾರು ಅಕ್ರಮ ನಡೆದಿರುವ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ. ಇಡೀ ವರದಿಯನ್ನು ಕಾನೂನು ತಜ್ಞರೊಂದಿಗೆ ಮತ್ತೊಮ್ಮೆ ಪರಿಶೀಲಿಸಿ ಮುಂದಿನ ಕ್ರಮವಹಿಸಲು ಸರಕಾರ ಸಿದ್ಧತೆ ನಡೆಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖವಾಗಿ ವೆಂಟಿಲೇಟರ್, ಆಕ್ಸಿಜನ್ ಉಪಕರಣಗಳ ಖರೀದಿ, ನಿರ್ವಹಣೆ ಲೋಪ, ಕೊವಿಡ್-19 ನಿರ್ವಹಣಾ ಉಪಕರಣ, ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್ ಖರೀದಿ ಮತ್ತು ಸಂಗ್ರಹಣೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪ ಸಂಬಂಧ ಸುವಿಸ್ತಾರವಾಗಿರುವ ಮಾಹಿತಿಯನ್ನು ಒದಗಿಸಲಾಗಿದೆ. ಆದರೆ ಇನ್ನಷ್ಟು ಮಾಹಿತಿ ಕಲೆ ಹಾಕಬೇಕಿರುವುದರಿಂದ ಮಧ್ಯಂತರ ವರದಿಯನ್ನು ಸಲ್ಲಿಸಿದ್ದು, ಮುಂದಿನ ದಿನದಲ್ಲಿ ಪೂರ್ಣ ಪ್ರಮಾಣದ ವರದಿಯನ್ನು ಸಲ್ಲಿಸುವುದಾಗಿ ಆಯೋಗದ ಸದಸ್ಯರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.